Site icon Vistara News

Team India: ಭಾರತವನ್ನು ಸೋಲಿಸುವುದು ಕಷ್ಟ ಎಂದ ಆಸೀಸ್​ ಮಾಜಿ ಕ್ಯಾಪ್ಟನ್​

Ricky Ponting

ಮುಂಬಯಿ: ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಆಟಗಾರ ರಿಕಿ ಪಾಂಟಿಂಗ್ ಅವರು ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ(Team India) ಗೆಲುವಿನ ನಿರೀಕ್ಷೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಮರ್ಥವಾಗಿರುವ ಭಾರತ ತಂಡವನ್ನು ಸೋಲಿಸುವುದು ಇತರ ತಂಡಗಳಿಗೆ ಕಷ್ಟದ ಮಾತು ಎಂದು ಹೇಳಿದ್ದಾರೆ.

ವಿಶ್ವಕಪ್​ನ ಐಸಿಸಿ ಕಾಮೆಂಟ್ರಿ ಪ್ಯಾನಲ್​ನಲ್ಲಿರುವ ರಿಕಿ ಪಾಂಟಿಂಗ್, “ಟೀಮ್ ಇಂಡಿಯಾ ಆಟಗಾರರ ಒತ್ತಡವನ್ನು ಹಿಡಿದಿಟ್ಟುಕೊಳ್ಳುವ ಕಲೆಯನ್ನೆ ಸರಿಯಾಗಿ ಅರಿತಿದ್ದಾರೆ. ಹೀಗಾಗಿ ಅವರನ್ನು ಸೋಲಿಸುವುದು ಅತ್ಯಂತ ಕಠಿಣ. ಈ ಬಾರಿ ಕಪ್​ ಗೆಲ್ಲುವ ಎಲ್ಲ ಸಾಧ್ಯತೆ ಇದೆ” ಎಂದು ಹೇಳಿದರು.

“ನಾನು ಮೊದಲಿನಿಂದಲೂ ಹೇಳಿದ್ದೇನೆಂದರೆ, ಭಾರತ ಇತರ ತಂಡವನ್ನು ಸೋಲಿಸುವ ತಂಡವಾಗಲಿದೆ. ತಂಡದಲ್ಲಿ ತುಂಬಾ ಪ್ರತಿಭಾವಂತ ಆಟಗಾರರು ಕಾಣಿಸಿಕೊಂಡಿದ್ದಾರೆ. ವೇಗದ ಬೌಲಿಂಗ್, ಸ್ಪಿನ್ ಮತ್ತು ಅಗ್ರ ಕ್ರಮಾಂಕದಿಂದ ಹಿಡಿದು ಮಧ್ಯಮ ಕ್ರಮಾಂಕದ ಎಲ್ಲ ಬ್ಯಾಟರ್​ಗಳು ಉತ್ತಮ ಫಾರ್ಮ್​ನಲ್ಲಿದ್ದಾರೆ” ಎಂದು ಪಾಂಟಿಂಗ್ ಐಸಿಸಿ ಸಂದರ್ಶನದಲ್ಲಿ ತಿಳಿಸಿದರು.

ಇದನ್ನೂ ಓದಿ Ind vs Pak : ಭಾರತವನ್ನು ಟೀಕಿಸಿದ್ದ ಪಾಕಿಸ್ತಾನ ಕ್ರಿಕೆಟ್​ ನಿರ್ದೇಶಕನ ವಿರುದ್ಧ ಐಸಿಸಿ ಕ್ರಮ?

ವಿಶ್ವಕಪ್​ ಸಾಧನೆ

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿದ್ದಾರೆ. 46 ವಿಶ್ವಕಪ್​ ಪಂದ್ಯಗಳನ್ನು ಆಡಿ 1743 ರನ್​ ಬಾರಿಸಿದ್ದಾರೆ. 6 ಅರ್ಧಶತಕ ದಾಖಲಿಸಿದ್ದಾರೆ. 5 ಶತಕ ಕೂಡ ಬಾರಿಸಿದ್ದಾರೆ. 28 ಕ್ಯಾಚ್​ ಪಡೆದಿದ್ದಾರೆ.

ಭಾರತ ವಿಶ್ವಕಪ್​ ಗೆಲ್ಲಲಿದೆ ಪಾಕ್​ ಮಾಜಿ ಆಟಗಾರ

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತವೇ ಕಪ್​ ಗೆಲ್ಲುವ ಹಾಟ್ ಫೇವರಿಟ್ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌(Mohammad Amir) ಭವಿಷ್ಯ ನುಡಿದಿದ್ದಾರೆ. “ನಿಸ್ಸಂಶಯವಾಗಿ ಭಾರತವೇ ವಿಶ್ವಕಪ್​ ಗೆಲ್ಲುವ ಹಾಟ್ ಫೇವರಿಟ್ ಆಗಿದೆ. ಭಾರತದ ವಿರುದ್ಧ ಯಾವುದೇ ತಂಡ ಆಡಿದರೂ, ಗೆಲುವಿಗಾಗಿ ತಮ್ಮ ಶೇಕಡಾ 110 ರಷ್ಟು ಉತ್ತಮ ಪ್ರದರ್ಶನ ನೀಡಬೇಕು. ಭಾರತವನ್ನು ತವರು ನೆಲದಲ್ಲಿ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಉದಾಹರಣೆಗೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಾಗ ಪ್ರತಿ ತಂಡವು ಹೋರಾಡುತ್ತದೆ. ಅಂತೆಯೇ ಪ್ರತಿ ತಂಡವು ಭಾರತಕ್ಕೆ ಭೇಟಿ ನೀಡಿದಾಗಲೂ ಗೆಲುವಿಗೆ ಕಷ್ಟಪಡುತ್ತದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಅತ್ಯಂತ ಬಲಿಷ್ಠ ತಂಡವಾಗಿ ಗೋಚರಿಸಿದೆ. ಈ ಬಾರಿ ವಿಶ್ವಕಪ್ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ” ಎಂದು ಹೇಳಿದ್ದಾರೆ.

ಅಖ್ತರ್​ ಭವಿಷ್ಯ

2011ರ ವಿಶ್ವಕಪ್​ನಂತೆಯೇ ಈ ಬಾರಿಯೂ ಭಾರತ(IND vs PAK) ತಂಡ ವಿಶ್ವಕಪ್(icc world cup 2023)​ ಗೆಲ್ಲಲಿದೆ ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್​ ಅಖ್ತರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “2011ರ ವಿಶ್ವಕಪ್​ ಇತಿಹಾಸ ಮತ್ತೆ ಮರುಕಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ತವರಿನಲ್ಲಿ ಭಾರತವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಭಾರತ ಸೆಮಿಫೈನಲ್ ಹಂತ ದಾಟಿದ್ದೇ ಆದರೆ ಕಪ್​ ತನ್ನದಾಗಿಸಿಕೊಳ್ಳುತ್ತದೆ. ಭಾರತ ತಂಡ ಅತ್ಯಂತ ಶ್ರೇಷ್ಠ ಪ್ರದರ್ಶನ ತೋರುತ್ತಿದೆ. 2019ರಲ್ಲಿಯೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಅದೃಷ್ಟ ಕೈಕೊಟ್ಟ ಕಾರಣ ಭಾರತ ಸೆಮಿಯಲ್ಲಿ ಸೋಲು ಕಂಡಿತು. ಎಲ್ಲ ಸಾಮರ್ಥ್ಯವಿರುವ ಭಾರತಕ್ಕೆ ಈ ಬಾರಿ ಅದೃಷ್ಟವೊಂದು ಕೈಹಿಡಿದರೆ ಕಪ್​ ಗ್ಯಾರಂಟಿ” ಎಂದಿದ್ದಾರೆ.

Exit mobile version