ಬೆಂಗಳೂರು: ಪ್ರತಿಷ್ಠಿತ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಟ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನದ ಹ್ಯಾಂಗ್‌ಝೂನಲ್ಲಿ ನಡೆಯಲಿದೆ. ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಮೊದಲ ಬಾರಿ ಆಡುತ್ತಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡ ಪ್ರಮುಖ ಯುವ ವೇಗಿ ಶಿವಂ ಮಾವಿ(Shivam Mavi) ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಉಮ್ರಾನ್ ಮಲಿಕ್ಗೆ ಅವಕಾಶ
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ಶಿವಂ ಮಾವಿ ಅವರು ಕೆಲವು ದಿನಗಳ ಹಿಂದೆ ಗಾಯಕ್ಕೆ ತುತ್ತಾಗಿದ್ದು ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಏಷ್ಯನ್ ಗೇಮ್ಸ್ನಿಂದ ಹೊರಬೀಳಲಿದ್ದಾರೆ. ಅವರ ಬದಲಿಗೆ ಉಮ್ರಾನ್ ಮಲಿಕ್(Umran Malik) ಅವರನ್ನು ತಂಡದಲ್ಲಿ ಸೇರಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಚೊಚ್ಚಲ ಬಾರಿ ಭಾರತ ತಂಡ ಸ್ಪರ್ಧೆ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್, ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. ಆದರೆ ಭಾರತ ಇದುವರೆಗೆ ಆಡಿಲ್ಲ. ಈ ಬಾರಿ ಪುರುಷರ ತಂಡ ಮತ್ತು ಮಹಿಳೆಯರ ತಂಡ ಕಣಕ್ಕಿಳಿಯುತ್ತಿದೆ. ಪುರುಷರ ತಂಡವನ್ನು ಋತುರಾಜ್ ಗಾಯಕ್ವಾಡ್, ಮಹಿಳಾ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್)ರ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.
ವಿವಿಎಸ್ ಲಕ್ಷ್ಮಣ್ ಕೋಚ್
ಪ್ರಸ್ತುತ ಸಾಗುತ್ತಿರುವ ಏಷ್ಯಾಕಪ್ ಮತ್ತು ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಕಾರಣ ತಂಡದ ಪ್ರಮುಖ ಕೋಚ್ ರಾಹುಲ್ ದ್ರಾವಿಡ್, ವಿಶ್ವಕಪ್ ಆಡಲಿರುವ ಭಾರತ ತಂಡದ ಜತೆಗೆ ಇರಲಿದ್ದಾರೆ. ಹೀಗಾಗಿ ಮಾಜಿ ಕ್ರಿಕೆಟಿಗ, ಪ್ರಸ್ತುತ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್(VVS Laxman) ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಲಕ್ಷ್ಮಣ್ ಅವರು ದ್ರಾವಿಡ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಹಲವು ಸರಣಿಯಲ್ಲಿ ಕೋಚ್ ಆಗಿ ಮುನ್ನಡೆಸಿದ್ದಾರೆ. ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಲೆ ಮತ್ತು ಫೀಲ್ಡಿಂಗ್ ಕೋಚ್ ಆಗಿ ಮುನೀಶ್ ಬಾಲಿ ಕೂಡ ಭಾರತ ತಂಡದೊಂದಿಗೆ ಇರಲಿದ್ದಾರೆ ಎಂದು ತಿಳಿದುಬಂದಿದೆ
ಇದನ್ನೂ ಓದಿ Asian Games 2023: ಭಾರತ ಕ್ರಿಕೆಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್
ಭಾರತ ಪುರುಷರ ತಂಡ
ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿ.ಕೀ)
ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್
ಮಹಿಳಾ ಕ್ರಿಕೆಟ್ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್ ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆತುಜಾ,ಅನುಷಾ ಬಾರೆಡ್ಡಿ.
ಸ್ಟ್ಯಾಂಡ್‌ಬೈ ಆಟಗಾರರು: ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್.
38 ವಿಭಾಗಗಳಲ್ಲಿ ಸ್ಪರ್ಧೆ
ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್‌ಬಾಲ್ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್‌ಬಾಲ್ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂ ಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ.