ತರೋಬ (ವೆಸ್ಡ್ ಇಂಡೀಸ್) : ಏಕದಿನ ಪಂದ್ಯಗಳನ್ನು (IND vs WI T20) ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿರುವ ಭಾರತ ತಂಡ, ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ೨೦ ಸರಣಿಯ ಮೊದಲ ಪಂದ್ಯಕ್ಕಾಗಿ ಸಿದ್ಧತೆ ನಡೆಸಿಕೊಂಡಿದೆ. ಇತ್ತಂಡಗಳ ನಡುವೆ ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ) ಪಂದ್ಯ ನಡೆಯಲಿದ್ದು ಈ ಸರಣಿಯನ್ನೂ ವಶಪಡಿಸಿಕೊಳ್ಳುವುದು ಭಾರತ ತಂಡದ ಇರಾದೆಯಾಗಿದೆ.
ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಕಾಯಂ ನಾಯಕ ರೋಹಿತ್ ಶರ್ಮ ತಂಡಕ್ಕೆ ಮರಳಿದ್ದು, ಜತೆಗೆ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಟಿ೨೦ ಬಳಗ ಸೇರಿಕೊಂಡಿದ್ದಾರೆ. ಕೆ.ಎಲ್ ರಾಹುಲ್ ಅವರಿಗೆ ತಗುಲಿರುವ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಇಲ್ಲ. ಅದೇ ರೀತಿ ತಂಡಕ್ಕೆ ಸೇರ್ಪಡೆಗೊಂಡಿರುವ ಆರ್. ಅಶ್ವಿನ್ ೧೧ರ ಬಳಗದಲ್ಲಿ ಅವಕಾಶ ಪಡೆಯುವರೇ ಎಂಬ ಮಾಹಿತಿಯೂ ಇಲ್ಲ.
ಆರಂಭಿಕರು ಯಾರು?
ಶಿಖರ್ ಧವನ್ ಏಕದಿನ ಸರಣಿಗೆ ಮಾತ್ರ ಸೀಮಿತ. ಹೀಗಾಗಿ ಟಿ೨೦ ಸರಣಿಯಲ್ಲಿ ರೋಹಿತ್ ಶರ್ಮ ಜತೆ ಇನಿಂಗ್ಸ್ ಆರಂಭಿಸುವವರು ಯಾರೆಂಬ ಕೌತುಕ ಸೃಷ್ಟಿಯಾಗಿದೆ. ರಾಹುಲ್ ಅಲಭ್ಯರಾದರೆ, ರಿಷಭ್ ಪಂತ್ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ ಈ ಪ್ರವಾಸದಿಂದ ಸಂಪೂರ್ಣ ವಿಶ್ರಾಂತಿ ಪಡೆದಿರುವ ಕಾರಣ ದೀಪಕ್ ಹೂಡ ಅಥವಾ ಶ್ರೇಯಸ್ ಅಯ್ಯರ್‌ಗೆ ಮೂರನೇ ಕ್ರಮಾಂಕದಲ್ಲಿ ಸ್ಥಾನ ಸಿಗಬಹುದು. ಸೂರ್ಯಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿ ಕೊಟ್ಟರೆ ದಿನೇಶ್ ಕಾರ್ತಿಕ್ ಹಾಗೂ ರವೀಂದ್ರ ಜಡೇಜಾ ಫಿನಿಶರ್ ಜವಾಬ್ದಾರಿ ಹೊತ್ತುಕೊಳ್ಳುವ ಸಾಧ್ಯತೆಗಳಿವೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್ ಇದ್ದು, ಯಾರಿಗೆ ಅವಕಾಶ ಸಿಗಬಹುದು ಎಂದು ಕಾದುನೋಡಬೇಕಷ್ಟೆ. ಸ್ಪಿನ್ ವಿಭಾಗದಲ್ಲಿ ಯಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯಿ ಹಾಗೂ ಆರ್. ಅಶ್ವಿನ್ ಇದ್ದಾರೆ. ಜಡೇಜಾ ಆಫ್ ಸ್ಪಿನ್ ಆಯ್ಕೆಯಾಗಿರುವ ಕಾರಣ ಯಜ್ವೇಂದ್ರ ಚಹಲ್‌ಗೆ ಲೆಗ್‌ಸ್ಪಿನ್ ಅವಕಾಶ ದೊರೆಯಬಹುದು.
ತಿರುಗೇಟು ನೀಡಲು ರೆಡಿ
ಏಕದಿನ ಸರಣಿಯಲ್ಲಿ ಸೋಲುಂಡಿರುವ ವಿಂಡೀಸ್ ಬಳಗ ತಿರುಗೇಟು ನೀಡುವ ಉತ್ಸಾಹದಲ್ಲಿದೆ. ಸ್ಫೋಟಕ ಬ್ಯಾಟರ್ ಶಿಮ್ರೋನ್ ಹೆಟ್ಮಾಯರ್ ತಂಡ ಸೇರಿಕೊಂಡಿದ್ದಾರೆ. ನಿಕೋಲಸ್ ಪೂರನ್, ಒಡೇನ್ ಸ್ಮಿತ್, ರೋವ್ಮನ್ ಪೊವೆಲ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್ ಸೇರಿದಂತೆ ಹಲವು ದಾಂಡಿಗರಿದ್ದಾರೆ. ಬೌಲಿಂಗ್‌ನಲ್ಲಿ ಅಲ್ಜಾರಿ ಜೋಸೆಫ್, ಒಬೆದ್ ಮಕಾಯ್, ಹೇಡನ್ ವಾಲ್ಶ್ ಭಾರತಕ್ಕೆ ಸವಾಲೊಡ್ಡಬಲ್ಲರು.
ಭಾರತ ಸಂಭಾವ್ಯ ತಂಡ : ರೋಹಿತ್ ಶರ್ಮ (ನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್), ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಯಜ್ವೇಂದ್ರ ಚಹಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್
ಪಿಚ್ ಹೇಗಿದೆ?
ತರೊಬದ ಬ್ರಿಯಾನ್ ಲಾರಾ ಸ್ಟೇಡಿಯಮ್‌ನಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೊಳ್ಳುತ್ತಿದೆ. ಕೆರಿಬಿಯನ್ ಪ್ರಿಮಿಯರ್ ಲೀಗ್‌ನ ೩೧ ಪಂದ್ಯಗಳು ಇಲ್ಲಿ ನಡೆದಿವೆ. ಓವರ್ ಒಂದಕ್ಕೆ ಸರಾಸರಿ ೭ ರನ್‌ಗಳು ಇಲ್ಲಿನ ಪಿಚ್‌ನಲ್ಲಿ ದಾಖಲಾಗುತ್ತವೆ. ಅದೇ ರೀತಿ ಶುಕ್ರವಾರ ಟ್ರಿನಿಡಾಡ್‌ನಲ್ಲಿ ಶೇಕಡಾ ೮ರಷ್ಟು ಮಳೆ ಸುರಿಯುವ ಸಾಧ್ಯತೆಗಳಿವೆ.
ಪಂದ್ಯದ ವಿವರ
ಪಂದ್ಯ ನಡೆಯುವ ಸ್ಥಳ : ಬ್ರಿಯಾಲ್ ಲಾರಾ ಸ್ಟೇಡಿಯಮ್, ತರೋಬ, ಟ್ರಿನಿಡಾಡ್
ಪಂದ್ಯ ಆರಂಭದ ಸಮಯ: ರಾತ್ರಿ ೮ ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ)
ನೇರ ಪ್ರಸಾರ ಎಲ್ಲಿ: fancode ಆಪ್‌ನಲ್ಲಿ ಪಂದ್ಯದ ಸ್ಟ್ರೀಮಿಂಗ್ ಲಭ್ಯವಿದೆ. ಡಿಡಿಯಲ್ಲೂ ನೇರ ಪ್ರಸಾರ ವೀಕ್ಷಣೆ ಮಾಡಬಹುದು.