Site icon Vistara News

Team India: ಆಸ್ಟ್ರೇಲಿಯಾದಲ್ಲಿ ರಹಾನೆ ಸಾರಥ್ಯದ ಯಂಗ್‌ ಬ್ರಿಗೇಡ್‌ ಟೆಸ್ಟ್​ ಗೆದ್ದ ಸಂಭ್ರಮಕ್ಕೆ ತುಂಬಿತು ಮೂರು ವರ್ಷ

Team India

ಬೆಂಗಳೂರು: ಅಜಿಂಕ್ಯ ರಹಾನೆ ಸಾರಥ್ಯದ ಯಂಗ್‌ ಬ್ರಿಗೇಡ್‌ ಅಸಾಮಾನ್ಯ ಸಾಹಸದೊಂದಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಸರಣಿ ಗೆದ್ದ ಸಂಭ್ರಮಕ್ಕೆ ಇಂದಿಗೆ ಮೂರು ವರ್ಷ ಪೂರ್ತಿಗೊಂಡಿದೆ. ಅಂದಿನ ಸರಣಿ ವಿಜೇತ ಫೋಟೊವನ್ನು ಹಂಚಿಕೊಂಡು ಬಿಸಿಸಿಐ ಈ ಸುಂದರ ನೆನಪನ್ನು ಮತ್ತೆ ಮೆಲುಕು ಹಾಕಿದೆ.

ಗಬ್ಬಾ ಅಂಗಳದಲ್ಲಿ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಪಂಥಾಹ್ವಾನವನ್ನು ಸ್ವೀಕರಿಸಿ ಬಂದಿದ್ದ ರಿಷಭ್‌ ಪಂತ್‌ ಎಂದಿನ ಬಿರುಸಿನ ಶೈಲಿಯಲ್ಲಿ ಬ್ಯಾಟ್‌ ಬೀಸುತ್ತ ಸಾಗಿ ಕಾಂಗರೂಗಳಿಗೆ ಸೋಲಿನ ರುಚಿ ತೋರಿಸಿದ್ದರು. ಅಂತಿಮವಾಗಿ ಜೋಶ್‌ ಹ್ಯಾಝಲ್‌ವುಡ್‌ ಎಸೆತವನ್ನು ಲಾಂಗ್‌ ಆಫ್‌ ಬೌಂಡರಿಗೆ ಬಡಿದಟ್ಟುವುದರೊಂದಿಗೆ ನೂತನ ಇತಿಹಾಸವೊಂದು ನಿರ್ಮಾಣಗೊಂಡಿತ್ತು. 32 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಈ ಅನಿರೀಕ್ಷಿತ ಆಘಾತಕ್ಕೆ ತತ್ತರಿಸಿ ಬಿಕ್ಕಳಿಸಿತ್ತು.!

ಕೀಪರ್‌ ರಿಷಭ್‌ ಪಂತ್‌ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಭಾರತದ ಗೆಲುವಿನ ಹೀರೋಗಳಾಗಿ ಮೂಡಿಬಂದಿದ್ದರು. ಇವರ ಸಾಹಸಗಾಥೆ ದೇಶದ ಮುಂದಿನ ಪೀಳಿಗೆಯ ಯಶಸ್ವಿ ಕ್ರಿಕೆಟ್‌ ಅಧ್ಯಾಯಕ್ಕೆ ಸೊಗಸಾದ ಮುನ್ನುಡಿಯೊಂದನ್ನು ಬರೆಯಿತು. ದೇಶದ ಕ್ರಿಕೆಟ್‌ ಭವಿಷ್ಯ ಇಂಥ ಯುವ ಆಟಗಾರರ ಕೈಯಲ್ಲಿ ಭದ್ರವಾಗಿದೆ ಎಂಬುದು ಈ ಪ್ರವಾಸದಲ್ಲಿ ಸಾಬೀತಾಗಿತ್ತು.

100 ಓವರ್‌ಗಳಲ್ಲಿ ಭಾರತ 328 ರನ್‌ ಗಳಿಸ ಬೇಕಿತ್ತು. ಅಂತಿಮ ದಿನ ಪಂದ್ಯ ಹೇಗೂ ತಿರುವು ಪಡೆಯಬಹುದಿತ್ತು. ಗೆದ್ದರೆ ಆಸ್ಟ್ರೇಲಿಯ ಗೆದ್ದೀತು, ಇಲ್ಲವೇ ಪಂದ್ಯ ಡ್ರಾ ಆದೀತು, ಆದರೆ ಭಾರತಕ್ಕೆ ಗೆಲುವು ಒಲಿಯುವುದು ಕಷ್ಟ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಅಲ್ಲದೇ ಬ್ರಿಸ್ಬೇನ್‌ ಅಂಗಳದ ಅಷ್ಟೂ ದಾಖಲೆಗಳು ಆಸ್ಟ್ರೇಲಿಯದ ಪರವಾಗಿದ್ದವು. ಕಳೆದ ಕೆಲವು ದಶಕಗಳಿಂದ ಇಲ್ಲಿ ಆಸೀಸ್‌ ಅಜೇಯವಾಗಿ ಮೆರೆದಾಡುತ್ತಿತ್ತು. ಆದರೆ ಪಂತ್‌, ಗಿಲ್‌ ಮತ್ತು ಪೂಜಾರ ಸೇರಿಕೊಂಡು ಒಂದೇ ದಿನದಲ್ಲಿ ಗಬ್ಟಾದ ಅಷ್ಟೂ ದಾಖಲೆಗಳನ್ನು ಅಳಿಸಿ ಹಾಕಿದ್ದರು.

ಭಾರತ ಈ ಗುರಿಯನ್ನು 97 ಓವರ್‌ಗಳಲ್ಲಿ 7 ವಿಕೆಟಿಗೆ 329 ರನ್‌ ಬಾರಿಸಿ ಗೆದ್ದು ಬಂದಿತ್ತು. ಗಬ್ಬಾದಲ್ಲಿ ತ್ರಿವರ್ಣ ಧ್ವಜದೊಂದಿಗೆ ಭಾರತೀಯ ಆಟಗಾರರು ಮೆರವಣಿಗೆ ನಡೆಸಿ ನೂತನ ಇತಿಹಾಸವನ್ನೇ ಬರೆದಿದ್ದರು. ಸೋಲಿನ ಬಳಿಕ ಆಸೀಸ್​ ತಂಡದ ಕೋಚ್​ ಜಸ್ಟೀನ್​ ಲ್ಯಾಂಗರ್​ ಯಾವುದೇ ಕಾರಣಕ್ಕೂ ಭಾರತೀಯರನ್ನು ಹಗುರವಾಗಿ ಕಾಣಬಾರದರು ಎನ್ನುವುದು ನನಗೆ ಈಗ ಅರ್ಥವಾಯಿತು ಎಂದು ಬಹಿರಂಗವಾಗಿಯೇ ಹೇಳಿದ್ದರು.

138 ಎಸೆತಗಳಿಂದ ಅಜೇಯ 89 ರನ್‌ (9 ಬೌಂಡರಿ, ಒಂದು ಸಿಕ್ಸರ್‌) ಬಾರಿಸಿದ ರಿಷಭ್‌ ಪಂತ್‌ ಈ ಗೆಲುವಿನ ನಿಜವಾದ ಹೀರೋ ಆಗಿ ಮೆರೆದಾಡಿದ್ದರು. ಈ ಸಂಭ್ರಮದ ಕ್ಷಣಕ್ಕೆ ಈಗ ಮೂರು ವರ್ಷ ತುಂಬಿದೆ.

Exit mobile version