ಹೊಸದಿಲ್ಲಿ : ಭಾರತ ತಂಡದ ಉಪನಾಯಕ ಕೆ. ಎಲ್ ರಾಹುಲ್ ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇತ್ತೀಚಿನ ಅವರ ಪ್ರದರ್ಶನಗಳು ಟೀಕೆಗೆ ಒಳಗಾಗುತ್ತಿವೆ. ಆದರೆ, ಐಪಿಎಲ್‌ನ ಲಖನೌ ಸೂಪರ್ ಜಯಂಟ್ಸ್ ತಂಡದ ಕೋಚ್ ಆಂಡಿ ಫ್ಲವರ್ ಮಾತ್ರ ರಾಹುಲ್ ಅವರ ನೈಜ ಬ್ಯಾಟಿಂಗ್ ಸಾಮರ್ಥ್ಯವನ್ನು ಕಂಡುಕೊಂಡಿದ್ದು, ಅತ್ಯುತ್ತಮ ಬ್ಯಾಟರ್ ಎಂಬುದಾಗಿ ಹೊಗಳಿದ್ದಾರೆ.
ಕೆ. ಎಲ್ ರಾಹುಲ್ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ೭೩ ರನ್ ಬಾರಿಸಿದ್ದರು. ಆದರೆ ವಿಕೆಟ್‌ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ ಅವರು ಕೊನೆಯಲ್ಲಿ ಮೆಹೆದಿ ಹಸನ್ ಕ್ಯಾಚ್ ಬಿಡುವ ಮೂಲಕ ಟೀಕೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಬಗ್ಗೆ ಮತ್ತೆ ಚರ್ಚೆಗಳು ಆರಂಭಗೊಂಡಿವೆ.
“ರಾಹುಲ್ ಉತ್ತಮ ಕ್ರಿಕೆಟಿಗ ಅಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇತ್ತೀಚಿನ ಕೆಲವು ಪ್ರದರ್ಶನವನ್ನು ಆಧರಿಸಿ ಆ ರೀತಿ ಹೇಳುವುದು ಸಾಧ್ಯವಿಲ್ಲ,” ಎಂದು ಆಂಡಿ ಫ್ಲವರ್ ಹೇಳಿದ್ದಾರೆ.
“ರಾಹುಲ್ ತಾವೊಬ್ಬ ಉತ್ತಮ ಬ್ಯಾಟರ್ ಎಂಬುದನ್ನು ಪದೇಪದೆ ಸಾಬೀತು ಮಾಡಿದ್ದಾರೆ. ಅವರೊಬ್ಬ ಉತ್ತಮ ಕ್ರಿಕೆಟಿಗ. ಅವರ ಆಟವನ್ನು ನೋಡುವುದೇ ಚಂದ. ಬ್ಯಾಟಿಂಗ್‌ನಲ್ಲಿ ಉತ್ತಮ ರೆಕಾರ್ಡ್ ಕೂಡ ಹೊಂದಿದ್ದಾರೆ. ಐಪಿಎಲ್‌ನಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಹೀಗಾಗಿ ನಾನು ಅವರಿಗೆ ಉತ್ತಮ ರೇಟಿಂಗ್ಸ್ ಕೊಡುವೆ,” ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | INDvsBAN | ಅರ್ಧ ಶತಕ ಬಾರಿಸಿ ಮಿಂಚಿದರೂ, ಕ್ಯಾಚ್ ಬಿಟ್ಟು ಟ್ರೋಲ್ ಆದ ಕೆ. ಎಲ್ ರಾಹುಲ್!