ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಮತ್ತು 141 ಗೆಲುವಿನೊಂದಿಗೆ ಭಾರತವು 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೆ ಪಡೆದುಕೊಂಡಿದೆ. ರೋಹಿತ್ ಶರ್ಮಾ ಮತ್ತು ಬಳಗ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ 12 ಅಂಕಗಳ ಜತೆಗೆ 100% ಪ್ರತಿ ಶತಕ ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿದೆ. ಆಸ್ಟ್ರೇಲಿಯಾದ ಅಂಕಗಳು 22 ಅಂಕಗಳನ್ನು ಪಡೆದುಕೊಂಡಡಿದ್ದರೂ ಪ್ರತಿಶತ ಅಂಕ 61.11% ಹೊಂದಿರುವ ಕಾರಣ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ಶೂನ್ಯ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಡಬ್ಲ್ಯುಟಿಸಿ 2023-25ರ ಋತುವಿನ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ ಭಾರತ ಮತ್ತೊಮ್ಮೆ ಬ್ಯಾಟ್ ಮತ್ತು ಬಾಲ್ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿತು. ಭಾರತದ ಪರ ರವಿಚಂದ್ರನ್ ಅಶ್ವಿನ್ 12 ವಿಕೆಟ್ ಪಡೆದಿದ್ದರೆ, ಪದಾರ್ಪಣಾ ಆಟಗಾರ ಯಶಸ್ವಿ ಜೈಸ್ವಾಲ್ 171 ರನ್ ಗಳಿಸಿದರು. ಜುಲೈ 20ರಂದು ಪ್ರಾರಂಭವಾಗುವ ವಿಂಡೀಸ್ ವಿರುದ್ಧದ ಮತ್ತೊಂದು ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡಕ್ಕೆ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಬಲವಾದ ಅವಕಾಶವಿದೆ.
ಜುಲೈ 20ರಂದು ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದತ್ತ ಗಮನ ಹರಿಸುವ ಮೊದಲು ಭಾರತಕ್ಕೆ ಕೆಲವು ದಿನಗಳ ವಿಶ್ರಾಂತಿ ಲಭಿಸಿದೆ. ಈ ವೇಳೆ ತಂಡದ ಪ್ರದರ್ಶನವನ್ನು ಪರಾಮರ್ಶೆ ಮಾಡುವುದಾದರೆ ರೋಹಿತ್ ಶರ್ಮಾಮತ್ತು ಬಳಗ ಉತ್ತಮ ಸಾಧನೆ ತೋರಿದೆ. ಜೈಸ್ವಾಲ್ ಅವರ ಟೆಸ್ಟ್ ವೃತ್ತಿಜೀವನದ ಆರಂಭವು ಸಕಾರಾತ್ಮಕವಾಗಿದ್ದು, ಭಾರತ ತಂಡಕ್ಕೆ ಭವಿಷ್ಯದ ತಾರೆ ಆಗುವ ಲಕ್ಷಣ ತೋರಿದ್ದಾರೆ. ನಾಯಕ ರೋಹಿತ್ ಕೂಡ ಅದ್ಭುತ ಶತಕ ಗಳಿಸುವ ಮೂಲಕ ರನ್ ಗಳಿಸುವ ಹಾದಿಗೆ ಮರಳಿದರು.
ಇದನ್ನೂ ಓದಿ : IND vs WI: ನೂತನ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡ ವಿರಾಟ್ ಕೊಹ್ಲಿ
ಅಶ್ವಿನ್ ಎರಡು ಬಾರಿ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಜಡೇಜಾ, ಸಿರಾಜ್ ಮತ್ತು ಉನಾದ್ಕಟ್ ಅವರಂತಹ ಉಳಿದ ಬೌಲರ್ಗಳು ಅವರಿಗೆ ಉತ್ತಮ ಬೆಂಬಲ ಕೊಟ್ಟಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಶುಬ್ಮನ್ ಗಿಲ್ ಅವರ ವೈಫಲ್ಯವು ಮೊದಲ ಟೆಸ್ಟ್ನಲ್ಲಿ ಭಾರತದ ಭರ್ಜರಿ ಗೆಲುವನ ನಡುವೆಯೂ ಪತ್ತೆಯಾದ ಕೊರತೆಗಳಲ್ಲಿ ಒಂದು. ಬಲಗೈ ಬ್ಯಾಟರ್ ಕೇವಲ 6 ರನ್ ಗಳಿಸಿದ್ದಾರೆ. ಆದಾಗ್ಯೂ, 22 ವರ್ಷದ ಆಟಗಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮತ್ತು ಸ್ಥಾನವನ್ನು ಬಲಪಡಿಸುವ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.