ನವದೆಹಲಿ: ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾಕ್ಕೆ ಯಾರಾಗಲಿದ್ದಾರೆ ನೂತನ ಕೋಚ್(Team India New Head Coach) ಎಂಬ ಬಿಸಿ ಬಿಸಿ ಚರ್ಚೆಯ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಕೋಚ್, ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿರುವ ಜಸ್ಟಿನ್ ಲ್ಯಾಂಗರ್(Justin Langer) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ಸ್ಥಾನವು ಅಸಾಮಾನ್ಯ ಪಾತ್ರವಾಗಿದೆ ಎಂದು ಹೇಳುವ ಮೂಲಕ ಕೋಚಿಂಗ್ ಬಗ್ಗೆ ಒಲವು ತೋರಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಲ್ಯಾಂಗರ್, ಭಾರತ ತಂಡ ಕೋಚಿಂಗ್ ಮಾಡುವುದು ಅಸಾಮಾನ್ಯ ಪಾತ್ರವಾಗಿದೆ. ನನಗೂ ಕೋಚಿಂಗ್ ಮಾಡಲು ಕುತೂಹಲವಿದೆ. ಇಲ್ಲಿ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಗಮನಿಸುವಾಗ ಕೋಚಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವ ಸೂಚನೆಯೊಂದು ಲಭಿಸಿದೆ. ಸೋಮವಾರ ಬಿಸಿಸಿಐ ಕೋಚ್ ಹುದ್ದೆಗಾಗಿ(Team India Coach) ಬಿಸಿಸಿಐ(BCCI) ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ.
ಶುಕ್ರವಾರವಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾವು 3 ವರ್ಷಗಳ ದೀರ್ಘ ಅವಧಿಗಾಗಿ ಕೋಚ್ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದರು. ಜತೆಗೆ ದ್ರಾವಿಡ್ ಅವರಿಗೂ ಮರುಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರು. ಆದರೆ, ದ್ರಾವಿಡ್ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್ ಹುಡುಕಾಟದಲ್ಲಿದೆ.
ಬಿಸಿಸಿಐ ಕೂಡ ವಿದೇಶಿ ಕೋಚ್ ಆಯ್ಕೆಯ ಬಗ್ಗೆ ಆಲೋಚನೆ ನಡೆಸುತ್ತಿದೆ ಎನ್ನುವ ಮಾತುಗಳು ಈ ಹಿಂದೆಯೇ ಕೇಳಿ ಬಂದಿತ್ತು. 2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್ ಪ್ಲೆಚರ್ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್ ಆಡಿದರೂ ಭಾರತ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಯೋಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ Rahul Dravid : ವಿಶ್ವ ಕಪ್ ಬಳಿಕ ದ್ರಾವಿಡ್ ಭಾರತದ ಕೋಚ್ ಅಗಿರುವುದಿಲ್ಲ; ಮುಂದೆ ಯಾರು?
ಕ್ರಿಕೆಟ್ ಆಸ್ಟ್ರೇಲಿಯಾ ಕಂಡ ಯಶಸ್ವಿ ಕೋಚ್ ಗಳಲ್ಲಿ ಒಬ್ಬರಾದ ಜಸ್ಟಿನ್ ಲ್ಯಾಂಗರ್ ತಾವಾಗಿಯೇ ಕೋಚಿಂಗ್ ಬಗ್ಗೆ ಆಸಕ್ತಿ ತೋರಿರುವ ಕಾರಣ ಬಿಸಿಸಿಐ ಅವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ. ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸೀಸ್ ತಂಡ ಟಿ20 ವಿಶ್ವಕಪ್, ಇಂಗ್ಲೆಂಡ್ ಎದುರಿನ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಗೆದ್ದಿತ್ತು. ಮೂರು ವರ್ಷಗಳ ಕಾಲ ಅವರು ಆಸೀಸ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಒಟ್ಟಾರೆಯಾಗಿ ಟಿ20 ವಿಶ್ವಕಪ್ ಮುಗಿದ ಬಳಿಕ ಭಾರತ ತಂಡದ ಕೋಚ್ ಯಾರಾಗಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ.