Site icon Vistara News

Team India: ಭಾರತದ ಸೂಪರ್​ ಗೆಲುವಿಗೆ ಪಾಕಿಸ್ತಾನದ ದಾಖಲೆ ಪತನ

India players pose with the trophy after beating Afghanistan 3-0

ಬೆಂಗಳೂರು: ಅಫಘಾನಿಸ್ತಾನ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು ಸೂಪರ್​ ಓಪರ್​ನಲ್ಲಿ ಗೆದ್ದ ಭಾರತ ತಂಡ ದಾಖಲೆಯೊಂದನ್ನು ಬರೆದಿದೆ. ಅತ್ಯಧಿಕ ಬಾರಿ ಟಿ20 ಸರಣಿಯನ್ನು ಕ್ಲೀನ್​ಸ್ಪೀಪ್​ ಮಾಡಿದ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆದಿದೆ. ಪಾಕಿಸ್ತಾನದ ದಾಖಲೆ ಪತನಗೊಂಡಿದೆ.

ಇದುವರೆಗೆ ಟಿ20ಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಜಂಟಿಯಾಗಿ 8 ಬಾರಿ ದ್ವಿಪಕ್ಷೀಯ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದ ದಾಖಲೆ ಹೊಂದಿತ್ತು. ಆದರೆ, ಇದೀಗ ಭಾರತ 9 ಬಾರಿ ಈ ಸಾಧನೆ ಮಾಡಿ ಪಾಕಿಸ್ತಾನದ ದಾಖಲೆಯನ್ನು ಹಿಂದಿಕ್ಕಿದೆ. ಇದೇ ವರ್ಷ ನಡೆಯುವ ಟಿ20 ವಿಶ್ವಕಪ್​ಗೂ ಮುನ್ನ ಭಾರತದ ಈ ಸಾಧನೆ ವಿಶ್ವಕಪ್​ಗೆ ಆತ್ಮವಿಶ್ವಾಸ ಹೆಚ್ಚಿಸಿದೆ.

ಅತ್ಯಂತ ರೋಚಕವಾಗಿ ನಡೆದ ಪಂದ್ಯ


ಬೃಹತ್​ ಮೊತ್ತದ ಅತ್ಯಂತ ರೋಚಕ ಹೋರಾಟ ಕಂಡ ಬುಧವಾರದ ಅಂತಿಮ ಟಿ20 ಪಂದ್ಯ ಟೈಯಲ್ಲಿ ಅಂತ್ಯಗೊಂಡ ಬಳಿಕ ಅಂತಿಮವಾಗಿ ಎರಡನೇ ಸೂಪರ್‌ ಓವರ್‌ನಲ್ಲಿ ಗೆಲುವು ಇತ್ಯರ್ಥ ಕಂಡಿತು. ಬೆಂಗಳೂರಿನ ಕ್ರಿಕೆಟ್​ ಅಭಿಮಾನಿಗಳಿಗೆ ಈ ಪಂದ್ಯ ನಿಜಕ್ಕೂ ಸಂಪೂರ್ಣ ರಸದೌತಣ ನೀಡಿತು.

ಮೊದಲ ಸೂಪರ್‌ ಓವರ್‌ನಲ್ಲಿ ಆಡಲಿಳಿದ ಅಫಘಾನಿಸ್ತಾನ ಒಂದು ವಿಕೆಟಿಗೆ 16 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಕೂಡ ವಿಕೆಟ್‌ ನಷ್ಟವಿಲ್ಲದೇ 16 ರನ್‌ ಗಳಿಸಿದ್ದರಿಂದ ಸೂಪರ್​ ಓವರ್​ ಕೂಡ ಟೈ ಆಯಿತು. ಎರಡನೇ ಸೂಪರ್‌ ಓವರಿನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 5 ಎಸೆತಗಳಲ್ಲಿ ಎರಡು ವಿಕೆಟಿಗೆ 11 ರನ್‌ ಗಳಿಸಿದ್ದರೆ, ಅಫಘಾನಿಸ್ತಾನ ತಂಡವು ಮೂರು ಎಸೆತಗಳಲ್ಲಿ 2 ವಿಕೆಟಿಗೆ ಕೇವಲ 1 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಭಾರತ ಸರಣಿಯನ್ನು ಕ್ಲೀನ್​ಸ್ಪೀಪ್​ಗೈದ ಸಾಧನೆ ಮಾಡಿತು.

ಇದನ್ನೂ ಓದಿ IND vs AFG: ಹೋರಾಡಿ ಸೋತ ಆಫ್ಘನ್​; ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. 22 ರನ್​ ಒಟ್ಟುಗೂಡುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಇನ್ನೇನು 100 ರನ್​ ಮಾಡುವುದು ಕಷ್ಟ ಎನ್ನುವ ಹಂತದಲ್ಲಿ ನಾಯಕ ರೋಹಿತ್​ ಶರ್ಮ(121*) ಮತ್ತು ರಿಂಕು ಸಿಂಗ್(69*)​ ಅವರ ಸಮಯೋಚಿತ ಬ್ಯಾಟಿಂಗ್​ ನಡೆಸಿದ ಪರಿಣಾಮ ಭಾರತ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 212 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿದ ಅಫಘಾನಿಸ್ತಾನ ಅಂತಿಮ ಎಸೆತದಲ್ಲಿ ಗೆಲುವಿಗೆ 3 ರನ್​ ತೆಗೆಯುವ ಸವಾಲಿಗೆ ಸಿಲುಕಿತು. ಆದರೆ 2 ರನ್​ ಗಳಿಸಿದ ಗುಲ್ಬದಿನ್ ಪಂದ್ಯವನ್ನು ಟೈ ಮಾಡಿಸಿದರು. ಆಫ್ಘನ್​ 6 ವಿಕಟ್​ಗೆ 212 ರನ್​ ಬಾರಿಸಿತು.

ಭಾರತಕ್ಕೆ ರೋಹಿತ್​ ಶರ್ಮ ಶತಕ ಬಾರಿಸುವ ಮೂಲಕ ನೆರವಾದರು. ಇವರಿಗೆ ರಿಂಕು ಸಿಂಗ್​ ಉತ್ತಮ ಸಾಥ್​ ನೀಡಿದರು. ಉಭಯ ಆಟಗಾರರು ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಆಫ್ಘನ್​ ಬೌಲರ್​ಗಳ ಮೇಲೆರಗಿ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ನೆರದಿದ್ದ ಪ್ರೇಕ್ಷಕರಿಗೆ ಟಿ20ಯ ರಸದೌತಣ ನೀಡಿದರು.

ರಿಂಕು ಸಿಂಗ್​ ಕೂಡ ಅರ್ಧಶತಕ ಬಾರಿಸಿ ತಂಡದ ಬೃಹತ್​ ಮೊತಕ್ಕೆ ಕಾರಣರಾದರು. ರಿಂಕು ಮತ್ತು ರೋಹಿತ್​ ಸೇರಿಕೊಂಡು 5ನೇ ವಿಕೆಟ್​ಗೆ ಅಜೇಯ 190 ರನ್​ ಜತೆಯಾಟ ನಡೆಸಿದರು. ರೋಹಿತ್​ ಶರ್ಮ 69 ಎಸೆತಗಳಿಂದ 11 ಬೌಂಡರಿ ಮತ್ತು 8 ಸಿಕ್ಸರ್​ ನೆರವಿನಿಂದ ಅಜೇಯ 121 ರನ್​ ಬಾರಿಸಿದರು. ರಿಂಕು 38 ಎಸೆತ ಎದುರಿಸಿ ಅಜೇಯ 63 ರನ್​ ಗಳಿಸಿದರು. ಸಿಡಿದದ್ದು 6 ಸಿಕ್ಸರ್​ ಮತ್ತು 2 ಬೌಂಡರಿ. ಅದರಲ್ಲೂ ಕೊನೆಯ ಓವರ್​ ಎಸೆದ ಕರೀಂ ಜನ್ನತ್​ಗೆ ಹ್ಯಾಟ್ರಿಕ್ ಸಿಕ್ಸರ್​ ಬಾರಿಸಿ ಮಿಂಚಿದರು. ಈ ಓವರ್​ನಲ್ಲಿ ಒಟ್ಟು 36 ರನ್​ ಹರಿದು ಬಂತು. ಆಫ್ಘನ್​ ಪರ ಬೌಲಿಂಗ್​ನಲ್ಲಿ ಮಿಂಚಿದ ಆಟಗಾರನೆಂದರೆ ಫರೀದ್ ಅಹ್ಮದ್ ಮಾತ್ರ. ಅವರು 4 ಓವರ್​ ಎಸೆದು 20 ರನ್​ ನೀಡಿ 3 ವಿಕೆಟ್​ ಕಿತ್ತರು.

Exit mobile version