ಬೆಂಗಳೂರು: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಜೈತ್ರಯಾತ್ರೆ ಮುಂದುವರಿಸಿರುವ ಭಾರತ ತನ್ನ ಅಂತಿಮ ಲೀಗ್ ಪಂದ್ಯವನ್ನು ನೆದರ್ಲೆಂಡ್ಸ್(IND vs NED) ವಿರುದ್ಧ ಆಡಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದ(Team India) ಆಟಗಾರರು ಬೆಂಗಳೂರಿಗೆ ಬಂದು ತಲುಪಿದ್ದಾರೆ.
ಬೆಂಗಳೂರು ತಲುಪಿದ ಟೀಮ್ ಇಂಡಿಯಾ ಆಟಗಾರರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ ಭವ್ಯ ಸಾಗತ ಕೋರಲಾಯಿತು. ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಡುವ ವಿರಾಟ್ ಕೊಹ್ಲಿಯನ್ನು ನೋಡಲು ಅವರ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಭಾರತೀಯ ಆಟಗಾರರು ಬೆಂಗಳೂರು ತಲುಪಿದ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ವಿರಾಟ್ ಮಾತ್ರ ತಂಡದೊಂದಿಗೆ ಪ್ರಯಾಣಿಸದೆ ಏಕಾಂಗಿಯಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಪಂದ್ಯಕ್ಕೆ ಅನುಷ್ಕಾ ಶರ್ಮ ಹಾಜರ್!
ದ್ವಿತೀಯ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಅವರು ಈ ಬಾರಿ ವಿಶ್ವಕಪ್ನ ಹೆಚ್ಚಿನ ಪಂದ್ಯಗಳಿಗೆ ಹಾಜರ್ ಆಗಿರಲಿಲ್ಲ. ಆದರೆ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಅವರು ಬರಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅವರು ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವ ವಿಡಿಯೊವೊಂದನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ದೀಪಾವಳಿ ಹಬ್ಬವನ್ನು ಜತೆಯಾಗಿ ಆಚರಿಸುವ ಸಲುವಾಗಿ ಅನುಷ್ಕಾ ಅವರು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ 6 ನಿಮಿಷ ತಡವಾಗಿ ಬಂದರೂ ಸೌರವ್ ಗಂಗೂಲಿ ಏಕೆ ‘ಟೈಮ್ಡ್ ಔಟ್’ ಆಗಿಲ್ಲ?
Anushka also reached Bengaluru 👀#viratkohli #anushkasharma #virushka pic.twitter.com/ztCP06Mu6Q
— 𝙒𝙧𝙤𝙜𝙣🥂 (@wrogn_edits) November 6, 2023
ಟಿಕೆಟ್ ಸೋಲ್ಡ್ ಔಟ್
ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಅವರ ಅಪಾರ ಅಭಿಮಾನಿಗಳಿರುವ ಕಾರಣ ಈ ಪಂದ್ಯದ ಟಿಕೆಟ್ಗಳಯ ಸೋಲ್ಡ್ ಔಟ್ ಆಗಿದೆ ಎಂದು ತಿಳಿದುಬಂದಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿಯೂ ಇದೆ. ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಅಲ್ಲದೆ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ನಡುವಣ ಶನಿವಾರದ ಪಂದ್ಯ ಮಳೆಯಿಂದ ಅರ್ಧಕ್ಕೆ ರದ್ದುಗೊಂಡಿತ್ತು. ಹೀಗಾಗಿ ಈ ಪಂದ್ಯಕ್ಕೂ ಮಳೆಯ ಭೀತಿ ಇದೇ ಇದೆ. ಪಂದ್ಯ ರದ್ದಾದರೂ ಭಾರತಕ್ಕೆ ಯಾವುದೇ ಚಿಂತೆಯಿಲ್ಲ. ಭಾರತ ಸೆಮಿಫೈನಲ್ ಪ್ರವೇಶ ಪಡೆದಾಗಿದೆ.
ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಾಧ್ಯತೆ
ಭಾರತ ತಂಡ ಸೆಮಿ ಫೈನಲ್ ಪ್ರವೇಶಿಸಿದ ಕಾರಣ ತಂಡದಲ್ಲಿ ಕೆಲ ಬದಲಾವಣೆಯನ್ನು ಮಾಡುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಕಂಡುಬಂದಿದೆ. ಹೀಗಾದರೆ ಹಾರ್ದಿಕ್ ಪಾಂಡ್ಯ ಅವರ ಸ್ಥಾನಕ್ಕೆ ಆಯ್ಕೆಯಾದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು ಅವಕಾಶ ಪಡೆಯಬಹುದು. ಇಶಾನ್ ಕಿಶನ್, ಆರ್ ಅಶ್ವಿನ್ಗೂ ಅವಕಾಶ ನೀಡುವ ಸಾಧ್ಯತೆ ಇದೆ.