ಮೆಲ್ಬೋರ್ನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾದ ಬಳಿಕ, ಟೀಂ ಇಂಡಿಯಾ ಆಟಗಾರರು ಗುರುವಾರ ಮೆಲ್ಬೋರ್ನ್ ತಲುಪಿದ್ದಾರೆ. ಅಕ್ಟೋಬರ್ 23ರಂದು ಭಾನುವಾರ ಮೆಲ್ಬೋರ್ನ್ ಅಂಗಳದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಪಂದ್ಯವನ್ನಾಡುವ ಮೂಲಕ ಟಿ20 ವಿಶ್ವ ಕಪ್ (T20 World Cup) ಅಭಿಯಾನ ಆರಂಭಿಸಲಿದೆ.
ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವ ಕಪ್ ಲೀಗ್ ಹಂತದ ಮತ್ತು ಏಷ್ಯಾ ಕಪ್ ಸೋಲಿಗೆ ಸೇಡು ತೀರಿಸಲು ಎದುರು ನೋಡುತ್ತಿರುವ ರೋಹಿತ್ ಶರ್ಮಾ ಬಳಗ ಶುಕ್ರವಾರದಿಂದ ಕಠಿಣ ಅಭ್ಯಾಸ ನಡೆಸಲಿದೆ. ಭಾರತ ತಂಡ ಮೆಲ್ಬೋರ್ನ್‌ಗೆ ಬಂದಿಳಿದ ವಿಡಿಯೊವನ್ನು ಬಿಸಿಸಿ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಜತೆಗೆ ಯಜುವೇಂದ್ರ ಚಹಲ್ ಕೂಡ ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ ವಿಮಾನದಲ್ಲಿ ಮೆಲ್ಬೋರ್ನ್‌ಗೆ ಪ್ರಯಾಣಿಸುತ್ತಿರುವ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭಾರತ-ಪಾಕ್ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ
ಭಾರತ- ಪಾಕ್ ಪಂದ್ಯ ನಡೆಯಲಿರುವ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸುತ್ತ ಮುತ್ತ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಈ ಪಂದ್ಯ ನಡೆಯುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದು ವೇಳೆ ಭಾರತ-ಪಾಕ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ, ಓವರ್ಗಳ ಕಡಿತದೊಂದಿಗೆ ಪಂದ್ಯವನ್ನು ಮುಂದುವರಿಸುವ ಸಾಧ್ಯತೆ ಇದೆ. ಆದರೆ ನಿರಂತರ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಆಗ ಉಭಯ ತಂಡಗಳಿಗೂ ತಲಾ 1 ಪಾಯಿಂಟ್ ನೀಡಲಾಗುತ್ತದೆ.
ಭಾರತದ ವೇಳಾಪಟ್ಟಿ
ಅಕ್ಟೋಬರ್ 23 – ಭಾರತ vs ಪಾಕಿಸ್ತಾನ
ಅಕ್ಟೋಬರ್ 27- ಭಾರತ vs ರನ್ನರ್ ಅಪ್ (ಗುಂಪು A)
ಅಕ್ಟೋಬರ್ 30- ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 02- ಭಾರತ vs ಬಾಂಗ್ಲಾದೇಶ
ನವೆಂಬರ್ 06- ಭಾರತ vs ಬಿ ಗುಂಪಿನ ವಿಜೇತ ತಂಡ
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ.
ಮೀಸಲು ಆಟಗಾರರು:
ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ಶಾರ್ದೂಲ್ ಠಾಕೂರ್.
ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್ ವಿರುದ್ಧ ಗೆದ್ದು ಸೂಪರ್-12 ಹಂತಕ್ಕೆ ಲಗ್ಗೆಯಿಟ್ಟ ಶ್ರೀಲಂಕಾ