Site icon Vistara News

ಡರ್ಬಾನ್​ನಲ್ಲಿ ಅಭ್ಯಾಸ ಆರಂಭಿಸಿದ ಸೂರ್ಯ ಪಡೆ; ಎಚ್ಚರಿಕೆ ನೀಡಿದ ಕೋಚ್​!

team india

ಡರ್ಬಾನ್‌: ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ20 ಸರಣಿ ಗೆದ್ದ ಜೋಶ್​ನಲ್ಲಿರುವ ಯಂಗ್​ ಟೀಮ್​ ಇಂಡಿಯಾ(team india) ಮತ್ತೊಂದು ಟಿ20 ಸಣಿಯನ್ನಾಡಲು ಸಜ್ಜಾಗಿ ನಿಂತಿದೆ. ಭಾನುವಾರ ದಕ್ಷಿಣ ಆಫ್ರಿಕಾ(india vs south africa) ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಗುರುವಾರ ರಾತ್ರಿ ಡರ್ಬಾನ್ ತಲುಪಿರುವ ಟೀಮ್​ ಇಂಡಿಯಾ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಿದ್ದಾರೆ. ಈ ಮಾಹಿತಿಯನ್ನು ಬಿಸಿಸಿಐ(BCCI) ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಡರ್ಬಾನ್ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸುವ ಮುನ್ನ ಗುಂಪಾಗಿ ನಿಂತು ಮಾತುಕತೆ ನಡೆಸುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ಬಿಸಿಸಿಐ “ಡರ್ಬನ್‌ನಿಂದ ಹಲೋ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಗೆ ನಮ್ಮ ಅಭ್ಯಾಸ ಆರಂಭ” ಎಂದು ಬರೆದುಕೊಂಡಿದೆ.

ಎಚ್ಚರಿಕೆ ನೀಡಿದ ಕೋಚ್​

ಸರಣಿ ಆರಂಭಕ್ಕೂ ಮುನ್ನವೇ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಎಲ್ಲ ಬ್ಯಾಟರ್ಗಳು ಸರಿಯಾಗಿ ಅಭ್ಯಾಸ ನಿರತವಾಗಿ ಪೂರ್ವ ಯೋಜನೆಯೊಂದನ್ನು ಮಾಡದಿದ್ದರೆ ಕಠಿಣ ಸವಾಲು ಎದುರಿಸಬೇಕಾಗುತ್ತದೆ ಎಂದು ಖಡಕ್​ ಸೂಚನೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ದ್ರಾವಿಡ್ ಅವರು ಈ ಮಾತನ್ನು ಹೇಳಿದ್ದಾರೆ. “ದಕ್ಷಿಣ ಆಫ್ರಿಕಾದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲುಗಳು ಕಾದಿವೆ. ಪಿಚ್​ನಲ್ಲಿ ಹಸಿರು ಹುಲ್ಲು ಇರುವುದರಿಂದ ಇಲ್ಲಿ ಹೆಚ್ಚಿನ ಬೌನ್ಸರ್​ಗಳು ಇರಲಿದೆ. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್​ ನಡೆಸ ಬೇಕಾದರೆ ಸರಿಯಾದ ಬ್ಯಾಟಿಂಗ್​ ಅಭ್ಯಾಸ ನಡೆಸಬೇಕು ಎಂದು ಹೇಳಿದ್ದಾರೆ.

ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ

ಕೋಚ್​ ದ್ರಾವಿಡ್​ ಅವರ ಸಲಹೆಯಂತೆ ಟೀಮ್​ ಇಂಡಿಯಾದ ಎಲ್ಲ ಆಟಗಾರರು ಶುಕ್ರವಾರ ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಶನಿವಾರವೂ ಕೂಡ ಬೌಲಿಂಗ್​ಗಿಂತ ಬ್ಯಾಟಿಂಗ್​ಗೆ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಸೂರ್ಯಕುಮಾರ್​, ಇಶಾನ್ ಕಿಶನ್​, ಗಾಯಕ್ವಾಡ್​ ಮತ್ತು ಯಶಸ್ವಿ ಜೈಸ್ವಾಲ್​ ನೆಟ್ಸ್​ನಲ್ಲಿ ಬೆವರು ಸುರಿಸಿದ ಫೋಟೊಗಳು ಕೂಡ ವೈರಲ್​ ಆಗಿದೆ. ಒಟ್ಟಾರೆ ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ದ್ರಾವಿಡ್​ ಅವರು ಬಲಿಷ್ಠ ತಂಡವೊಂದನ್ನು ರಚಿಸಲು ಮುಂದಾಗಿರುವುದು ಖಚಿತವಾಗಿದೆ.

ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾ ತಲುಪಿದ ಯಂಗ್​ ಟೀಮ್​ ಇಂಡಿಯಾ; ಡಿ.10ರಿಂದ ಸರಣಿ ಆರಂಭ

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಮೊದಲು ಟಿ20 ಬಳಿಕ ಏಕದಿನ ಮತ್ತು ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಟಿ20 ತಂಡ ಮಾತ್ರ ಮೊದಲ ಹಂತದಲ್ಲಿ ದಕ್ಷಿಣ ಆಫ್ರಿಕಾ ತಲುಪಿದೆ. ಮುಂದಿನ ವಾರ ಏಕದಿನ ತಂಡ ದ್ವಿತೀಯ ಹಂತದಲ್ಲಿ ಭಾರತದಿಂದ ಪ್ರಯಾಣ ಬೆಳೆಸಲಿದೆ. ಏಕದಿನ ಸರಣಿಗೆ ಹಿರಿಯ ಆಟಗಾರರಾದ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಅವರು ಲಭ್ಯರಿಲ್ಲ. ಕೆ.ಎಲ್​ ರಾಹುಲ್​ ಏಕದಿನ ತಂಡದ ನಾಯಕನಾಗಿದ್ದಾರೆ. ಆದರೆ ಎರಡು ಪಂದ್ಯಗಳ ಟೆಸ್ಟ್‌ ಸರಣಿ ವೇಳೆ ಕೊಹ್ಲಿ ರೋಹಿತ್​ ಮತ್ತು ಬುಮ್ರಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮೊದಲ ಟೆಸ್ಟ್‌ ಪಂದ್ಯ ಡಿ. 26ರಿಂದ ಸೆಂಚುರಿಯನ್‌ನಲ್ಲಿ ಆರಂಭಗೊಳ್ಳಲಿದೆ. ದ್ವಿತೀಯ ಟೆಸ್ಟ್‌ ಜ. 3ರಿಂದ ಕೇಪ್‌ಟೌನ್​ನಲ್ಲಿ ನಡೆಯಲಿದೆ.

Exit mobile version