ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ(IND VS AUS) ವಿರುದ್ಧದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ(team india) ಸಜ್ಜಾಗಿದೆ. ನಾಗ್ಪುರ ತಲುಪಿದ ಭಾರತ ತಂಡದ ಆಟಗಾರು ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಆಟಗಾರರು ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ಫೆ.9ರಿಂದ ಆರಂಭವಾಗಲಿದೆ. ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಈ ಸರಣಿ ಪ್ರಮುಖವಾಗಿದೆ. ಸದ್ಯ ಆಸ್ಟ್ರೇಲಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ. ಭಾರತ 2ನೇ ಸ್ಥಾನದಲ್ಲಿದೆ.
ನಾಗ್ಪುರದಲ್ಲಿ ವಿರಾಟ್ ಕೊಹ್ಲಿ, ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕೆ.ಎಲ್. ರಾಹುಲ್, ಅಕ್ಷರ್ ಪಟೇಲ್ ಸೇರಿದಂತೆ ಇತರ ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಜತೆಗೆ ಜಿಮ್ನಲ್ಲಿಯೂ ವರ್ಕೌಟ್ ಮಾಡುವ ಮೂಲಕ ಆಸೀಸ್ ಸವಾಲನ್ನು ಸಮರ್ಥವಾಗಿ ಎಸುರಿಸಲು ಸಜ್ಜಾಗಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಟೀಮ್ ಇಂಡಿಯಾದ ಸಿದ್ಧತೆ ಆರಂಭವಾಗಿದೆ ಎಂದು ಬರೆದುಕೊಂಡಿದೆ.
ಇದನ್ನೂ ಓದಿ IND VS AUS: ಅಶ್ವಿನ್ ಶೈಲಿಯಲ್ಲಿ ಆಸೀಸ್ ಆಟಗಾರರಿಗೆ ಬೌಲಿಂಗ್ ನಡೆಸುತ್ತಿರುವ ಮಹೀಶ್ ಪಿಥಿಯಾ
ಈ ಸರಣಿಯಲ್ಲಿ ಭಾರತ ತಂಡ ಗೆದ್ದರೆ ಟೆಸ್ಟ್ನಲ್ಲಿ ಅಗ್ರ ಸ್ಥಾನದ ಜತೆಗೆ ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶ ಪಡೆಯಲಿದೆ. ಹೀಗಾಗಿ ಭಾರತೀಯ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಅತ್ತ ಆಸ್ಟ್ರೇಲಿಯಾ ಕೂಡ ಭಾರತೀಯ ಸ್ಪಿನ್ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದೆ. ಒಟ್ಟಾರೆ ಇತ್ತಂಡಗಳ ಈ ಹೋರಾಟ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದೆ.