Site icon Vistara News

Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

Team India stuck in Barbados

Team India stuck in Barbados: Latest weather report from the Caribbean country

ಬ್ರಿಜ್‌ಟೌನ್‌: ಟಿ20 ವಿಶ್ವಕಪ್‌ ಗೆದ್ದ ಬಳಿಕ ತವರಿಗೆ ಮರಳಲು ಸಜ್ಜಾಗಿ ನಿಂತಿರುವ ಟೀಮ್​ ಇಂಡಿಯಾ(Team India stuck in Barbados) ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಕೆರಿಬಿಯನ್‌ ರಾಷ್ಟ್ರದಲ್ಲಿ(Caribbean country) ಬೀಸುತ್ತಿರುವ ಭಾರೀ ಚಂಡಮಾರುತದ ಅಬ್ಬರ ಮತ್ತೆ ಹೆಚ್ಚಾಗಿರುವ ಕಾರಣ ಬಾರ್ಬಡೋಸ್​ನಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆಗೆ ತೊಂದರೆಯಾಗಿದೆ. ಜತೆಗೆ ವಿಮಾನ ನಿಲ್ದಾಣಗಳು ಬಂದ್‌ ಆಗಿವೆ. ಹೀಗಾಗಿ ಆಟಗಾರರು ಭಾರತಕ್ಕೆ ಬರುವುದು ಇನ್ನೂ 2 ದಿನ ತಡವಾಗುವ ಸಾಧ್ಯತೆ ಕಂಡುಬಂದಿದೆ.

ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.

ಸದ್ಯ ಟೀಮ್​ ಇಂಡಿಯಾದ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಬಾರ್ಬಡೋಸ್​ನ ಹೊಟೇಲ್‌ನಲ್ಲಿ ತಂಗಿದೆ. ಚಂಡಮಾರುತದ ಕಾರಣ, ಭಾರತೀಯ ಆಟಗಾರರಿರುವ ಹೊಟೇಲ್‌ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ. ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು.

ಇದನ್ನೂ ಓದಿ Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು

ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಭಾರತ 2007ರ ಬಳಿಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಂತರ ಎರಡು ಬಾರಿ ಪಂದ್ಯಾವಳಿಯನ್ನು ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ವಿರಾಟ್ ಕೊಹ್ಲಿ 76 ರನ್ ಗಳಿಸಿದರೆ, ಅಕ್ಷರ್ ಪಟೇಲ್ 47 ರನ್ ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 169 ರನ್​ಗೆ ಹೋರಾಟ ಮುಗಿಸಿತು.

ವಿದಾಯ ಹೇಳಿದ ರೋಹಿತ್​– ಕೊಹ್ಲಿ


ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ, ರವೀಂದ್ರ ಜಡೇಜ ಮತ್ತು ರೋಹಿತ್​ ಶರ್ಮ ಅವರು ಟಿ20 ಕ್ರಿಕೆಟ್​ಗೆ ವಿದಾಯ ಘೋಷಿಸಿದರು. ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ವಿರಾಟ್​ ಕೊಹ್ಲಿ ಅವರು ಈ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದು ಹೇಳಿದರು.

Exit mobile version