Site icon Vistara News

Team India: 40 ವರ್ಷ ಸೇವೆ ಸಲ್ಲಿಸಿದ ಅಟೆಂಡರ್​ಗೆ ಸ್ಮರಣೀಯ ಉಡುಗೊರೆ ನೀಡಿದ ಟೀಮ್​ ಇಂಡಿಯಾ

Team India

ನವದೆಹಲಿ: ಬುಧವಾರ ನಡೆದ ಅಫಘಾನಿಸ್ತಾನ(India vs Afghanistan) ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ(Team India) ಆಟಗಾರರು ಪಂದ್ಯದ ಗೆಲುವಿನ ಬಳಿಕ ಅರುಣ್ ಜೇಟ್ಲಿ ಸ್ಟೇಡಿಯಂನ(Arun Jaitley Stadium, Delhi) ಡ್ರೆಸಿಂಗ್​ ರೂಮ್​ನ ಅಟೆಂಡರ್​ಗೆ ಸ್ಮರಣೀಯ ಉಡುಗೊರೆಯೊಂದನ್ನು ನೀಡಿ ಗೌರವಿಸಿದ್ದಾರೆ. ಇದರ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಡೆಲ್ಲಿ ಮತ್ತು ಡಿಸ್ಟ್ರಿಕ್ಟ್‌ ಕ್ರಿಕೆಟ್ ಅಸೋಸಿಯೇಷನಲ್ಲಿ ಅಟೆಂಡರ್ ಆಗಿ 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ವಿನೋದ್ ಕುಮಾರ್ ಅವರಿಗೆ ಭಾರತ ತಂಡದ ಎಲ್ಲ ಆಟಗಾರರು ಜೆರ್ಸಿಯಲ್ಲಿ ಆಟೋಗ್ರಾಫ್​ ಹಾಕಿ ವಿಶೇಷ ಗೌರವ ಸಲ್ಲಿಸಿದರು. ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಈ ಸುಂದರ ಉಡುಗೊರೆಯನ್ನು ನೀಡಿದರು. ತಂಡದ ಕೋಚ್​ ರಾಹುಲ್​ ದ್ರಾವಿಡ್​ ಅವರು ಎಲ್ಲ ಆಟಗಾರರಿಗೂ ವಿನೋದ್ ಕುಮಾರ್ ಅವರ ಪರಿಚಯವನ್ನು ಮಾಡಿದರು. ಟೀಮ್​ ಇಂಡಿಯಾದ ಈ ನಡೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿದೆ.

ಪಂದ್ಯ ಗೆದ್ದ ಭಾರತ

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫಘಾನಿಸ್ತಾನ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಆಫ್ಘನ್​ ಪರ ನಾಯಕ ಹಶ್ಮತುಲ್ಲಾ ಶಾಹಿದಿ 80, ಅಜ್ಮತುಲ್ಲಾ ಒಮರ್ಜಾಯ್ 62 ರನ್ ಗಳಿಸಿ ಉತ್ತಮ ಆಟವಾಡಿದರು. ಭಾರತದ ಪರ ಬುಮ್ರಾ 4 ವಿಕೆಟ್ ಕಬಳಿಸಿ ಮಿಂಚಿದರು. ಹಾರ್ದಿಕ್ ಪಾಂಡ್ಯ 2, ಕುಲದೀಪ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಭಾರತ ಆರಂಭದಿಂದಲೂ ಅಬ್ಬರದ ಆಟ ಪ್ರದರ್ಶಿಸಿತು. 35 ಓವರ್ ಗಳಲ್ಲೇ 273 ರನ್ ಗಳಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು. ನಾಯಕ ರೋಹಿತ್ ಶರ್ಮ 84 ಎಸೆತಗಳಲ್ಲಿ 131 ರನ್ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 16 ಬೌಂಡರಿ ಮತ್ತು ಆಕರ್ಷಕ 5 ಸಿಕ್ಸರ್​ಗಳು ಒಳಗೊಂಡಿತ್ತು. ಇವರ ವಿಕೆಟ್​ ರಶೀದ್ ಖಾನ್ ಕಿತ್ತರು. ಇಶಾನ್ ಕಿಶನ್ 47 ರನ್ ಗಳಿಸಿ ಔಟಾದರು. ಕೊಹ್ಲಿ 55 ಮತ್ತು ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ IND vs PAK: ಮೋದಿ ನಾಡಲ್ಲಿ ಪಾಕ್​ ಆಟಗಾರರಿಗೆ ಭರ್ಜರಿ ಸ್ವಾಗತ

ರಾಜಿಯಾದ ಕೊಹ್ಲಿ-ನವೀನ್​

ಈ ಪಂದ್ಯ ಮತ್ತೊಂದು ವಿಚಾರದಲ್ಲಿ ಮಹತ್ವ ಪಡೆಯಿತು. ಐಪಿಎಲ್‌ ಪಂದ್ಯದ ವೇಳೆ ಮೈದಾನದಲ್ಲಿಯೇ ಭಾರಿ ಸಂಘರ್ಷಕ್ಕೆ ಇಳಿದಿದ್ದ, ಅದಾದ ಬಳಿಕ ಎಲ್ಲಿಯೇ ಎದುರಾದರೂ ಮುಖ ತಿರುಗಿಸಿಕೊಂಡು ಹೋಗುತ್ತಿದ್ದ ವಿರಾಟ್‌ ಕೊಹ್ಲಿ (Virat Kohli) ಹಾಗೂ ಆಫ್ಘನ್‌ ವೇಗಿ ನವೀನ್‌ ಉಲ್‌ ಹಕ್‌ (Naveen Ul Haq) ಅವರು ಬುಧವಾರ (ಅಕ್ಟೋಬರ್‌ 11) ನಡೆದ ಭಾರತ-ಅಫಘಾನಿಸ್ತಾನ (IND vs AFG) ಪಂದ್ಯದ ವೇಳೆ ಮೈದಾನದಲ್ಲಿಯೇ ರಾಜಿ ಆಗಿದ್ದಾರೆ. ಇಬ್ಬರೂ ತಬ್ಬಿಕೊಂಡು, ಹ್ಯಾಂಡ್‌ ಶೇಕ್‌ ಮಾಡಿದ್ದು, ಪಂದ್ಯದ ಬಳಿಕವೂ ನಗುನಗುತ್ತ ಮಾತನಾಡಿದ್ದಾರೆ. ಇಬ್ಬರೂ ಕ್ರೀಡಾಸ್ಫೂರ್ತಿ ಮೆರೆದಿರುವುದಕ್ಕೆ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಕೊಹ್ಲಿ ಜತೆಗಿನ ರಾಜಿ ಕುರಿತು ನವೀನ್‌ ಉಲ್‌ ಹಕ್‌ ಮಾತನಾಡಿದ್ದು, “ಕೊಹ್ಲಿ ನಿಜವಾಗಿಯೂ ಒಳ್ಳೆಯ ವ್ಯಕ್ತಿ” ಎಂದಿದ್ದಾರೆ. ಸದ್ಯ ಉಭಯ ಆಟಗಾರರು ಮುನಿಸು ಮರೆತು ಒಂದಾಗಿದ್ದಾರೆ.

Exit mobile version