ಬಾರ್ಬಡೋಸ್: ಟಿ20 ವಿಶ್ವ ಚಾಂಪಿಯನ್ ಭಾರತ ತಂಡ(Team India) ಬಾರ್ಬಡೋಸ್ನಿಂದ(Barbados) ತವರಿಗೆ ಪ್ರಯಾಣ ಬೆಳೆಸಿದೆ(Team India’s departure). ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಬುಧವಾರ ಖಚಿತಪಡಿಸಿದೆ. ಟಿ20 ವಿಶ್ವಕಪ್ ಟ್ರೋಫಿಯ ವಿಡಿಯೊ ಹಾಕಿ ನಾವು ಮರಳುತ್ತಿದ್ದೇವೆ ಎಂದು ಬರೆದುಕೊಂಡಿದೆ. ಬುಧವಾರ ಬಾರ್ಬಡೋಸ್ನಿಂದ ಹೊರಡಿರುವ ಟೀಮ್ ಇಂಡಿಯಾ ಗುರುವಾರ ಬೆಳಗ್ಗೆ ನವದೆಹಲಿಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.
ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಭಾರತಕ್ಕೆ ಮರಳಲಿದ್ದಾರೆ. ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು. ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿ ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿತ್ತು. ಜತೆಗೆ ವಿಮಾನ ನಿಲ್ದಾಣಗಳು ಬಂದ್ ಆಗಿತ್ತು. ಹೀಗಾಗಿ ಭಾರತ ತಂಡ ಬಾರ್ಬಡೋಸ್ನ ಹೊಟೇಲ್‌ನಲ್ಲಿ ತಂಗಿತ್ತು.
17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತ
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು.
ಬೆರಿಲ್ ಚಂಡಮಾರುತದ ದೃಶ್ಯವನ್ನು ವಿಡಿಯೊ ಕಾಲ್ ಮೂಲಕ ಪತ್ನಿ ಅನುಷ್ಕಾಗೆ ತೋರಿಸಿದ ಕೊಹ್ಲಿ
ಚಂಡಮಾರುತದ ಅಬ್ಬರದ ದೃಶ್ಯವನ್ನು ವಿರಾಟ್ ಕೊಹ್ಲಿ(virat kohli) ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಗೆ(Virat- Anushka) ವಿಡಿಯೊ ಕಾಲ್ ಮೂಲಕ ತೋರಿಸುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ತಾವು ತಂಗಿರುವ ಹೊಟೇಲ್ ಕಿಟಕಿಯಿಂದ ಸಮುದ್ರದಲ್ಲಿ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳನ್ನು, ಮತ್ತು ಅಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಪತ್ನಿ ಅನುಷ್ಕಾಗೆ(anushka sharma) ವಿಡಿಯೊ ಕಾಲ್ ಮೂಲಕ ತೋರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಕುಟುಂಬಕ್ಕೆ ಮೊದಲ ಪ್ರಾಧಾನ್ಯತೆ ನೀಡುವ ಕೊಹ್ಲಿ ಯಾವುದೇ ಪಂದ್ಯ ಇರಲಿ ಇದು ಮುಕ್ತಾಯಗೊಂಡ ತಕ್ಷಣ ಪತ್ನಿಗೆ ವಿಡಿಯೊ ಕಾಲ್ ಮಾಡಿ ಮಾತನಾಡುತ್ತಾರೆ. ಕೆಲವೊಮ್ಮೆ ಕ್ರಿಕೆಟ್ ಸರಣಿ ಇದ್ದರೂ ಕೂಡ ಇದರಿಂದ ಹಿಂದೆ ಸರಿದು ಕುಟುಂಬದ ಜತೆ ಕಾಲ ಕಳೆಯುತ್ತಾರೆ. ಟಿ20 ವಿಶ್ವಕಪ್ ಗೆದ್ದ ಬಳಿಕವೂ ಕೂಡ ಕೊಹ್ಲಿ ಪತ್ನಿಗೆ ಕರೆ ಮಾಡಿ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಜತೆಗೆ ಪುಟ್ಟ ಮಗುವಿಗೆ ಫ್ಲೈಯಿಂಗ್ ಕಿಸ್ ನೀಡಿದ ವಿಡಿಯೊ ಕೂಡ ವೈರಲ್ ಆಗಿತ್ತು.