Site icon Vistara News

Team India | ವಿವಿಎಸ್​ ಲಕ್ಷ್ಮಣ್​ ಟೀಮ್​ ಇಂಡಿಯಾದ ಮುಂದಿನ ಕೋಚ್​; ಸುಳಿವು ನೀಡಿದ ಬಿಸಿಸಿಐ!

VVS Laxman

ಮುಂಬಯಿ: ಟಿ20 ವಿಶ್ವ ಕಪ್​ ಸೋಲಿನ ಬಳಿಕ ಟೀಮ್​ ಇಂಡಿಯಾದಲ್ಲಿ(Team India) ಬಿಸಿಸಿಐ ಈಗಾಗಲೇ ಹಲವು ಬದಲಾವಣೆ ಮಾಡಿದೆ. ಇದೀಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಧಿ ಬಳಿಕ ಹೊಸ ಕೋಚ್ ನೇಮಕಕ್ಕೆ ಬಿಸಿಸಿಐ ಮುಂದಾಗಿದೆ. ಈ ಸ್ಥಾನಕ್ಕೆ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಕ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

2023ರ ಏಕ ದಿನ ವಿಶ್ವಕಪ್ ಟೂರ್ನಿ ವರೆಗೆ ರಾಹುಲ್ ದ್ರಾವಿಡ್ ಅವರೇ ಭಾರತ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ. ಬಳಿಕ ದ್ರಾವಿಡ್ ಅವಧಿ ಅಂತ್ಯವಾಗಲಿದೆ. ಮತ್ತೊಂದು ಅವಧಿಗೆ ಕೋಚ್ ಆಗಿ ಮುಂದುವರಿಯಲು ಅವರಿಗೆ ಆಸಕ್ತಿ ಇಲ್ಲ. ಹೀಗಾಗಿ ದ್ರಾವಿಡ್​ ಬಳಿಕ ಲಕ್ಷ್ಮಣ್ ಅವರು ಮುಖ್ಯ ಕೋಚ್​ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ದ್ರಾವಿಡ್​ ಮೊದಲ ಬಾರಿಗೆ ಭಾರತ ತಂಡ ಮುಖ್ಯ ಕೋಚ್ ಆಗಲು ನಿರಾಸಕ್ತಿ ತೋರಿದ್ದರು. ಆದರೆ ಹಲವರ ಒತ್ತಾಯದ ಮೇರೆಗೆ ಅವರು ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ಅವರು ಎರಡನೇ ಅವಧಿಗೆ ಕೋಚ್ ಆಗಿ ಮುಂದುವರಿಯಲು ಮನಸ್ಸು ಮಾಡಿಲ್ಲ. ಹೀಗಾಗಿ ಬಿಸಿಸಿಐ ವಿದೇಶಿ ಕೋಚ್​ ಬದಲು ಈ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲು ಮನಸ್ಸು ಮಾಡಿದೆ ಎಂದು ತಿಳಿದುಬಂದಿದೆ.

ಲಕ್ಷ್ಮಣ್ ಕೋಚಿಂಗ್​ನಲ್ಲಿ ಯಶಸ್ಸು ಕಂಡಿದೆ ಟೀಮ್​ ಇಂಡಿಯಾ​

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಹಲವು ಬಾರಿ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 2022ರಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಸರಣಿಗೆ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಿ ಯಶಸ್ಸು ಕಂಡಿದ್ದರು. ಇವರ ಮಾರ್ಗದರ್ಶನದಲ್ಲೇ ಅಂಡರ್ 19 ವಿಶ್ವ ಕಪ್ ಕೂಡ ಟೀಮ್​ ಇಂಡಿಯಾ ಗೆದ್ದಿತ್ತು. ಹೀಗಾಗಿ ದ್ರಾವಿಡ್​ ಬಳಿಕ ಟೀಮ್​ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಸೂಕ್ತ ಎಂದು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ | BCCI Review Meeting | ಏಕ ದಿನ ವಿಶ್ವ ಕಪ್​ಗೆ ತಂಡದ ರಚನೆ, ಒತ್ತಡದ ನಿರ್ವಹಣೆಗೆ ಆದ್ಯತೆ

Exit mobile version