ಢಾಕಾ : ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ನಿಗದಿತ ಅವಧಿಗಿಂತ ತಡವಾಗಿ ಓವರ್‌ಗಳನ್ನು ಮುಗಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡಕ್ಕೆ ಪಂದ್ಯದ ಸಂಭಾವನೆಯ ಶೇಕಡಾ ೮೦ ದಂಡ ವಿಧಿಸಲಾಗಿದೆ. ಐಸಿಸಿಯ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫರಿ ದಂಡದ ಮೊತ್ತವನ್ನು ಪ್ರಕಟಿಸಿದ್ದಾರೆ. ಟೀಮ್ ಇಂಡಿಯಾದ ಆಟಗಾರರು ನಿಗದಿತ ಸಮಯಕ್ಕಿಂತ ನಾಲ್ಕು ಓವರ್‌ಗಳಷ್ಟು ಕಡಿಮೆ ಮಾಡಿದ್ದ ಕಾರಣ ಓವರ್‌ಗೆ ಶೇಕಡಾ ೨೦ರಂತೆ ಒಟ್ಟು ಶೇಕಡಾ ೮೦ ದಂಡ ವಿಧಿಸಲಾಗಿದೆ.
ಐಸಿಸಿಯ ಕೋಡ್ ಆಫ್ ಕಾಂಡೆಕ್ಟ್‌ನ ಆರ್ಟಿಕಲ್ ೨.೨೨ರ ಪ್ರಕಾರ ನಿಗದಿಪಡಿಸಿರುವ ಸಮಯಕ್ಕಿಂತ ಹೆಚ್ಚು ಅವಧಿಯನ್ನು ತಂಡವೊಂದು ತೆಗೆದುಕೊಂಡರೆ ಆ ತಂಡದ ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿಗೆ ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಬಹುದು. ಆಟಗಾರರು ಒಪ್ಪಿಕೊಂಡು ಪಾವತಿಸಬೇಕು, ಇಲ್ಲವಾದರೆ ವಿಚಾರಣೆಗೆ ಹಾಜರಾಗಬೇಕು.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇದರ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂಬುದಾಗಿ ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಫೀಲ್ಡ್ ಅಂಪೈರ್‌ಗಳಾದ ಮೈಕೆಲ್ ಗಫ್, ತನ್ವಿರ್ ಅಹಮದ್, ಮೂರನೇ ಅಂಪೈರ್ ಶರ್ಫದುಲ್ಲಾ ಶಾಹಿದ್ ನಾಲ್ಕನೇ ಅಂಪೈರ್ ಗಾಜಿ ಸೋಹೆಲ್ ಭಾರತ ತಂಡದ ತಪ್ಪನ್ನು ರೆಫರಿಗೆ ವರದಿ ಮಾಡಿದ್ದರು.
ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ೧ ವಿಕೆಟ್ ವೀರೋಚಿತ ಸೋಲಿಗೆ ಒಳಗಾಗಿದೆ. ಎರಡನೇ ಪಂದ್ಯ ಡಿಸೆಂಬರ್ ೭ರಂದು ನಡೆಯಲಿದೆ.
ಇದನ್ನೂ ಓದಿ | INDvsBAN | ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ, ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 1 ವಿಕೆಟ್ ವೀರೋಚಿತ ಸೋಲು