ಮುಂಬಯಿ : ಪ್ರವಾಸಿ ಭಾರತ (Team India ) ಹಾಗೂ ನ್ಯೂಜಿಲೆಂಡ್ ನಡುವೆ ಶುಕ್ರವಾರ ಆಕ್ಲೆಂಡ್‌ನಲ್ಲಿ ಏಕ ದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಟಿ೨೦ ಸರಣಿಯನ್ನು ಗೆದ್ದಿರುವ ಭಾರತ ಏಕ ದಿನ ಸರಣಿಯನ್ನೂ ವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದೆ. ಏತನ್ಮಧ್ಯೆ, ಶುಕ್ರವಾರದ ಪಂದ್ಯ ಭಾರತ ತಂಡದ ಪಾಲಿಗೆ ೨೦೨೩ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್ ಸಿದ್ಧತೆಗೆ ಮೊದಲ ಪಂದ್ಯ ಎನಿಸಿಕೊಳ್ಳಲಿದೆ.
೨೦೨೩ರ ಅಕ್ಟೋಬರ್‌ನಲ್ಲಿ ವಿಶ್ವ ಕಪ್ ನಡೆಯಲಿದೆ. ಹೀಗಾಗಿ ಎಲ್ಲ ತಂಡಗಳಿಗೆ ಸಿದ್ಧತೆ ನಡೆಸಿಕೊಳ್ಳುವುದಕ್ಕೆ ೧೧ ತಿಂಗಳು ಅವಕಾಶವಿದೆ. ಅಂತೆಯೇ ಭಾರತವೂ ಮುಂದಿನ ೧೧ ತಿಂಗಳಲ್ಲಿ ಏಳು ಸರಣಿಗಳು ಹಾಗೂ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಈ ಮೂಲಕ ಏಕ ದಿನ ಮಾದರಿಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಿದೆ.
ಶುಕ್ರವಾರದಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿ ನಡೆಯಲಿದೆ. ಅದಾದ ಬಳಿಕ ಬಾಂಗ್ಲಾದೇಶ ಪ್ರವಾಸದಲ್ಲಿ ಮೂರು ಪಂದ್ಯಗಳಿವೆ. ಬಳಿಕ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಪಂದ್ಯ ನಡೆಯಲಿದೆ. ಬಳಿಕ ಶ್ರೀಲಂಕಾ, ವಿರುದ್ಧ ೩ ಪಂದ್ಯಗಳ ಸರಣಿ, ಆಸ್ಟ್ರೇಲಿಯಾ ವಿರುದ್ಧ ೩ ಪಂದ್ಯಗಳ ಸರಣಿ, ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಸರಣಿ ನಡೆಯಲಿದೆ. ಬಳಿಕ ಏಷ್ಯಾ ಕಪ್ ಟೂರ್ನಿ ಆಯೋಜನೆಗೊಂಡಿದ್ದು ಅದು ಏಕ ದಿನ ಮಾದರಿಯಲ್ಲಿ ನಡೆಯಲಿದೆ. ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ೩ ಪಂದ್ಯಗಳ ಏಕ ದಿನ ಸರಣಿ ಆಯೋಜನೆಗೊಂಡಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಶಿಖರ್ ಧವನ್ ತಂಡದ ನಾಯಕತ್ವ ವಹಿಸಲಿದ್ದಾರೆ. ಬಳಿಕ ಕಾಯಂ ನಾಯಕ ರೋಹಿತ್ ಶರ್ಮ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳಿವೆ. ವಿಶ್ವ ಕಪ್ಗೆ ಮೊದಲು ತಂಡವನ್ನು ಸಜ್ಜುಗೊಳಿಸುವುದಕ್ಕೆ ಹಾಗೂ ಆಟಗಾರರ ಆಯ್ಕೆಯ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ಸಿಗಲಿದೆ.
ಇದನ್ನೂ ಓದಿ | Asia Cup | ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲ್ಲ, ಜಯ್ ಶಾ ಹೇಳಿಕೆಗೆ ಅಫ್ರಿದಿ ಕೆಂಡಾಮಂಡಲ