ಬರ್ಮಿಂಗ್ಹಮ್ : ಭಾರತದ ಪುರುಷರ ಲಾನ್ ಬೌಲ್ಸ್ ಫೋರ್ ತಂಡ ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ (CWG- 2022) ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದೆ. ಇದು ಭಾರತ ತಂಡದ ಪಾಲಿನ ೧೧ನೇ ಬೆಳ್ಳಿಯ ಪದಕವಾಗಿದೆ. ಅಂತೆಯೇ ಒಟ್ಟು ಪದಕಗಳ ಸಂಖ್ಯೆ ೨೯ಕ್ಕೆ ಏರಿದೆ.
ಸುನೀಲ್ ಬಹಾದ್ದೂರ್, ನವನೀತ್ ಸಿಂಗ್, ಚಂದನ್ ಕುಮಾರ್ ಸಿಂಗ್, ದಿನೇಶ್ ಕುಮಾರ್ ಅವರಿದ್ದ ಭಾರತ ತಂಡ ಫೈನಲ್ ಹಣಾಹಣಿಯಲ್ಲಿ ಉತ್ತರ ಐರ್ಲೆಂಡ್ ತಂಡದ ವಿರುದ್ಧ ೫-೧೮ ಅಂಕಗಳಿಂದ ಹೀನಾಯ ಸೋಲಿಗೆ ಒಳಗಾಯಿತು. ಆದಾಗ್ಯೂ ಭಾರತ ತಂಡಕ್ಕೆ ಇದು ಐತಿಹಾಸಿಕ ಪದಕವಾಗಿದ್ದು, ಇದೇ ಮೊದಲ ಬಾರಿಗೆ ಪುರುಷರ ತಂಡ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದುಕೊಂಡಿದೆ.
ಸ್ಪರ್ಧೆ ಆರಂಭಗೊಂಡು ಮೊದಲ ಐದು ತುದಿಯ ಅವಕಾಶ ಮುಕ್ತಾಯಗೊಂಡರೂ ಭಾರತ ತಂಡಕ್ಕೆ ಅಂಕ ಗಳಿಸಲು ಸಾಧ್ಯವಾಗದೇ ಆರು ಅಂಕಗಳ ಹಿನ್ನಡೆ ಎದುರಿಸಿತು. ೧೦ನೇ ತುದಿಗೆ ತಲುಪಿದಾಗ ಎದುರಾಳಿ ತಂಡ ಸಂಪೂರ್ಣವಾಗಿ ಪಾರಮ್ಯ ಸಾಧಿಸಿದಲ್ಲದೆ, ೧೩-೫ ಅಂಕಗಳ ಮುನ್ನಡೆ ಪಡೆದುಕೊಂಡಿತು. ಇದಕ್ಕಿಂತ ಮೊದಲು ಭಾರತ ತಂಡ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ೧೩-೧೨ ಅಂಕಗಳ ಅಂತರದ ರೋಚಕ ಜಯ ದಾಖಲಿಸಿತ್ತು.
ಇದನ್ನೂ ಓದಿ | CWG – 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತದ ಲಾನ್ ಬೌಲ್ ತಂಡ