ದುಬೈ: ಐಸಿಸಿ ಪ್ರಕಟಿಸಿರುವ ನೂತನ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ನಂ.1 ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ಕಾರಣದಿಂದ ಸಿರಾಜ್ ಬೌಲಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಸಿರಾಜ್ 2 ಪಂದ್ಯಗಳನ್ನಾಡಿ ಒಟ್ಟು 5 ವಿಕೆಟ್ ಪಡೆದಿದ್ದರು.
ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಮೊದಲ ಪಂದ್ಯದಲ್ಲಿ 2, ದ್ವಿತೀಯ ಪಂದ್ಯದಲ್ಲಿ 3, ಅಂತಿಮ ಪಂದ್ಯದಲ್ಲಿ 4 ಮಹತ್ವದ ವಿಕೆಟ್ ಗಳನ್ನು ಪಡೆದುಕೊಂಡಿದ್ದರು. ಈ ಸಾಧನೆಯಿಂದ ಅವರು ನಂ. 1 ಸ್ಥಾನಕ್ಕೇರಿದ್ದಾರೆ. ಜತೆಗೆ ಸಿರಾಜ್ ಕಳೆದ ಒಂದು ವರ್ಷಗಳಿಂದ ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಟೇಕರ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ.
ಸದ್ಯ ಅವರು 729 ರೇಟಿಂಗ್ ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸೀಸ್ ವೇಗಿ ಜೋಶ್ ಹ್ಯಾಜಲ್ವುಡ್(727 ರೇಟಿಂಗ್ ಅಂಕ), ಕಿವೀಸ್ನ ಟ್ರೆಂಟ್ ಬೌಲ್ಟ್(708 ರೇಟಿಂಗ್ ಅಂಕ), ಮಿಚೆಲ್ ಸ್ಟಾರ್ಕ್(665) ಕಮ್ರವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | Icc Ranking | ಟೆಸ್ಟ್ ರ‍್ಯಾಂಕಿಂಗ್; ಭಾರಿ ಪ್ರಗತಿ ಕಂಡ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್