Site icon Vistara News

England Tour: ಆಂಗ್ಲರ ಮೇಲೆ ಭಾರತ ತಂಡದ ಸವಾರಿ

england tour

ಬರ್ಮಿಂಗ್‌ಹ್ಯಾಮ್‌: ಮರು ನಿಗದಿಯಾಗಿರುವ England Tour ಟೆಸ್ಟ್‌ ಸರಣಿಯ ಐದನೇ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಮುನ್ನಡೆಯ ಪಥದಲ್ಲಿ ಸಾಗುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ ೪೧೬ ರನ್‌ ಬಾರಿಸಿದ ಪ್ರವಾಸಿ ಬಳಗ ಪ್ರತಿಯಾಗಿ ಆಡಲು ಆರಂಭಿಸಿರುವ ಆತಿಥೇಯ ತಂಡ ೮೪ ರನ್‌ ಗಳಿಸುವಷ್ಟರಲ್ಲಿ ಪ್ರಮುಖ ೫ ವಿಕೆಟ್‌ಗಳನ್ನು ಕಬಳಿಸಿದೆ.

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ೪೧೬ ರನ್‌ ಗಳಿಸಿ ಆಲ್‌ಔಟ್‌ ಆಯಿತು. ಪ್ರತಿಯಾಗಿ ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ ದಿನದಾಟ ಮುಕ್ತಾಯಕ್ಕೆ ೮೪ ರನ್‌ಗಳಿಗೆ ೫ ವಿಕೆಟ್‌ ಕಳೆದುಕೊಂಡಿದೆ. ಹೀಗಾಗಿ ಭಾರತ ಇನ್ನೂ ೩೩೨ ರನ್‌ಗಳ ಮುನ್ನಡೆಯಲ್ಲಿದೆ. ಭಾರತದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರಿತ್‌ ಬುಮ್ರಾ ೩೫ ರನ್‌ಗಳಿಗೆ ೩ ವಿಕೆಟ್‌ ಕಬಳಿಸಿದರೆ, ಮೊಹಮ್ಮದ್‌ ಶಮಿ ೩೩ ರನ್‌ಗಳಿಗೆ ೧ ವಿಕೆಟ್‌ ತಮ್ಮದಾಗಿಸಿಕೊಂಡರು. ಮೊಹಮ್ಮದ್‌ ಸಿರಾಜ್‌ ಕೂಡ ಒಂದು ವಿಕೆಟ್‌ ಕಿತ್ತರು. ಜೋ ರೂಟ್‌ ೩೧ ರನ್‌ ಬಾರಿಸುವ ಮೂಲಕ ಆತಿಥೇಯ ತಂಡದ ಪರ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಿದರು.

ಜಡೇಜಾ ಶತಕ

ಪಂದ್ಯದ ಮೊದಲ ದಿನವಾದ ಶುಕ್ರವಾರ ೭ ವಿಕೆಟ್‌ ನಷ್ಟಕ್ಕೆ ೩೩೮ ರನ್‌ ಬಾರಿಸಿದ್ದ ಭಾರತ, ಎರಡನೇ ದಿನದ ಮೊದಲ ಅವಧಿಯ ೧೮ ಓವರ್‌ಗಳಲ್ಲಿ ಒಟ್ಟು ಮೊತ್ತಕ್ಕೆ ಮತ್ತೆ 78 ರನ್‌ಗಳನ್ನು ಸೇರಿಸಿತು. ಮೊದಲ ದಿನ ಅರ್ಧಶತಕ ಬಾರಿಸಿ ತಂಡದ ಕುಸಿತ ತಪ್ಪಿಸಿದ್ದ ರವೀಂದ್ರ ಜಡೇಜಾ (೧೦೪) ವಿದೇಶಿ ನೆಲದಲ್ಲಿ ಮೊದಲ ಶತಕ ಬಾರಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಅವರ ಮೂರನೇ ಶತಕವೂ ಹೌದು. ಅಂತಿಮ ಹಂತದಲ್ಲಿ ಸ್ಫೋಟಕ ರೀತಿಯಲ್ಲಿ ಬ್ಯಾಟ್‌ ಮಾಡಿದ ಜಸ್‌ಪ್ರಿತ್‌ ಬುಮ್ರಾ ಅಜೇಯ ೩೧ ರನ್‌ ಬಾರಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಮಳೆಯ ಕಣ್ಣಾಮುಚ್ಚಾಲೆ

ಮೊದಲ ದಿನ ಪಂದ್ಯ ಆರಂಭಕ್ಕೆ ಮೊದಲು ಸುರಿದ ಮಳೆ ಎರಡನೇ ದಿನವೂ ಕಣ್ಣಾಮುಚ್ಚಾಲೆ ಆಟವಾಡಿತು. ಇಂಗ್ಲೆಂಡ್‌ ತಂಡ ಬ್ಯಾಟ್‌ ಮಾಡಲು ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಸುರಿದ ಮಳೆ ಆಟ ಸ್ಥಗಿತವಾಗಲು ಕಾರಣವಾಯಿತು. ಸ್ವಲ್ಪ ಹೊತ್ತಿನಲ್ಲಿ ಮಳೆ ನಿಂತು ಆಟ ಶುರುವಾಯಿತು. ಆದರೆ, ಮತ್ತೆ ಸುರಿದ ಮಳೆ ಆಟಗಾರರು ಹೆಚ್ಚು ಹೊತ್ತು ಪೆವಿಲಿಯನ್‌ನಲ್ಲಿ ಕಾಯುವಂತೆ ಮಾಡಿತು.

ಸ್ಕೋರ್‌ ವಿವರ:

ಭಾರತ ಮೊದಲ ಇನಿಂಗ್ಸ್‌: ೮೪.೫ ಓವರ್‌ಗಳಲ್ಲಿ ೪೧೬ (ರಿಷಭ್‌ ಪಂತ್‌ ೧೪೬, ರವೀಂದ್ರ ಜಡೇಜಾ ೧೦೪, ಜಸ್‌ಪ್ರಿತ್‌ ಬುಮ್ರಾ ೩೧; ಜೇಮ್ಸ್‌ ಆಂಡರ್ಸನ್‌ ೬೦ಕ್ಕೆ೫, ಮ್ಯಾಥ್ಯೂ ಪಾಟ್ಸ್‌ ೧೦೫ಕ್ಕೆ೨).

ಇಂಗ್ಲೆಂಡ್‌ ಮೊದಲ ಇನಿಂಗ್ಸ್‌: ಜೊ ರೂಟ್‌ ೩೧, ಒಲಿ ಪೋಪ್‌ ೧೦, ಜಾನಿ ಬೈರ್‌ಸ್ಟೋವ್‌ ೧೨*; ಜಸ್‌ಪ್ರಿತ್‌ ಬುಮ್ರಾ ೩೫ಕ್ಕೆ ೩, ಮೊಹಮ್ಮದ್‌ ಸಿರಾಜ್‌ ೩೩ಕ್ಕೆ೧, ಮೊಹಮ್ಮದ್‌ ಸಿರಾಜ್‌ ೫ಕ್ಕೆ೧).

ಇದನ್ನೂ ಓದಿ: ಒಂದೇ ಓವರ್‌ನಲ್ಲಿ 35 ರನ್‌, ಬುಮ್ರಾ World Record

Exit mobile version