Site icon Vistara News

ತಮ್ಮದೇ ದಾಖಲೆ ಮುರಿದು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ತೇಜಿಂದರ್‌ ಪಾಲ್ ಸಿಂಗ್

Tajinderpal Singh Toor

ನವದೆಹಲಿ: ಭಾರತದ ಸ್ಟಾರ್​ ಶಾಟ್​ಪುಟ್​ ಎಸೆತಗಾರ ತೇಜಿಂದರ್‌ ಪಾಲ್ ಸಿಂಗ್‌(Tajinderpal Singh Toor) ಅವರು ರಾಷ್ಟ್ರೀಯ ಅಂತಾರಾಜ್ಯ ಚಾಂಪಿಯನ್‌ಶಿಪ್‌ ಪಂದ್ಯಾವಳಿಗಳಲ್ಲಿ(National inter-state athletics championships) ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದ್ದಾರೆ. ಭುವನೇಶ್ವರದಲ್ಲಿ ನಡೆಯುತ್ತಿರುವ ಈ ಕೂಟದ ಅಂತಿಮ ದಿನದಂದು 21.77 ಮೀ.ದೂರ ಶಾಟ್​ಪುಟ್​ ಎಸೆದು ತಮ್ಮದೇ ಹೆಸರಲ್ಲಿದ್ದ ಹಳೆಯ ಏಷ್ಯನ್‌ ದಾಖಲೆಯನ್ನು ಮುರಿಯುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ಗೆ(World championships) ಅರ್ಹತೆ ಪಡೆದರು.

ಪಂಜಾಬ್ ತಂಡವನ್ನು ಪ್ರತಿನಿಧಿಸುವ 28 ವರ್ಷದ ತೇಜಿಂದರ್‌ ಪಾಲ್​ 2021ರಲ್ಲಿ ಪಟಿಯಾಲದಲ್ಲಿ ನಡೆದ ಶಾಟ್​ಪುಟ್ ಟೂರ್ನಿಯಲ್ಲಿ 21.49 ಮೀ. ದೂರ ಎಸೆದು ಏಷ್ಯನ್ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ 21.77ಮೀ ದೂರ ಎಸೆದು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಈ ಋತುವಿನಲ್ಲಿ ತೋರಿದ ವಿಶ್ವದ ಒಂಬತ್ತನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ.

ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತೆ ಪಡೆಯಲು 21.40 ಮೀ, ಜತೆಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು 19 ಮೀ. ಥ್ರೋ ನಿಗದಿ ಪಡಿಸಲಾಗಿತ್ತು. ಮೊದಲ ಎರಡು ಸುತ್ತಿನಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಅವರು ಮೂರನೇ ಸುತ್ತಿನಲ್ಲಿ 21.77 ಮೀ. ದೂರ ಎಸೆಯುವ ಮೂಲಕ ಈ ಎರಡು ಪಂದ್ಯಾವಳಿಗಳಿಗೆ ಅರ್ಹತೆ ಪಡೆದರು. ದ್ವಿತೀಯ ಸುತ್ತಿನ ಎಸೆತ ಫೌಲ್​ ಆಗಿತ್ತು. ಕರಣ್​ವೀರ್​ ಸಿಂಗ್ 19.78ಮೀ/ ಥ್ರೋ ಮೂಲಕ ಎರಡನೇ ಸ್ಥಾನ ಪಡೆದು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು.

ಇದನ್ನೂ ಓದಿ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದ ಲಾಂಗ್​ ಜಂಪರ್ ಶ್ರೀಶಂಕರ್

ಶ್ರೇಷ್ಠ ಪ್ರದರ್ಶನ ತೋರಿದ ಬಳಿಕ ಮಾತನಾಡಿದ ತೇಜಿಂದರ್​, “ತರಬೇತಿ ವೇಳೆ 21.49 ಮೀ. ದೂರ ಥ್ರೋ ಎಸೆಯಲು ಯೋಜನೆ ರೂಪಿಸಿದ್ದೆ. ಆದರೆ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ” ಎಂದು ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

Exit mobile version