ಮುಂಬಯಿ : ಟೀಮ್ ಇಂಡಿಯಾ ಕಾಯಂ ನಾಯಕ ರೋಹಿತ್ ಶರ್ಮ ಗಾಯದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಮೀರ್ಪುರದಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯದಲ್ಲಿ (INDvsBAN) ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ರೋಹಿತ್ ಶರ್ಮ ಮತ್ತೆ ಬಾಂಗ್ಲಾಗೆ ಪ್ರವಾಸ ಮಾಡಿ ಎರಡನೇ ಪಂದ್ಯದಲ್ಲಿ ಆಡುವುದು ಅವರ ಅಪ್ಪಟ ಅಭಿಮಾನಿಗಳಿಗೆ ಬಿಟ್ಟು ಇನ್ಯಾರಿಗೂ ಬೇಕಾಗಿಲ್ಲ. ಅದು ಭಾರತ ತಂಡದ ಮಾಜಿ ಆಟಗಾರ ಮಾತಿನಲ್ಲೂ ವ್ಯಕ್ತಗೊಂಡಿದೆ.
ರೋಹಿತ್ ಶರ್ಮ ಅವರ ಹೆಬ್ಬೆರಳ ಗಾಯದ ಸಮಸ್ಯೆಯ ವರದಿ ಬಂದಿದ್ದು, ಅವರಿಗೆ ಯಾವುದೇ ಅಪಾಯ ಇಲ್ಲ ಎಂಬುದಾಗಿ ಗೊತ್ತಾಗಿದೆ. ಹೀಗಾಗಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅವರು ಬಾಂಗ್ಲಾದೇಶಕ್ಕೆ ಹಾರಿ ಅಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಒಂದು ವೇಳೆ ಅವರು ಬಾಂಗ್ಲಾ ವಿಮಾನ ಏರಿದರೆ ಮುಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗಲಿದೆ. ಯಾಕೆಂದರೆ ಆರಂಭಿಕ ಬ್ಯಾಟರ್ ಸ್ಥಾನಕ್ಕೆ ರೋಹಿತ್ ಶರ್ಮ ಬರಲಿದ್ದು, ಶುಬ್ಮನ್ ಗಿಲ್ ಅವಕಾಶ ಕಳೆದುಕೊಳ್ಳುತ್ತಾರೆ. ಆದರೆ, ಶುಬ್ಮನ್ ಗಿಲ್ ಮೊದಲ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದಾರೆ. ಹೀಗಾಗಿ ಅವರನ್ನು ಬೆಂಚು ಕಾಯಿಸಿದರೆ ವಿರೋಧ ನಿಶ್ಚಿತ.
ಈ ಬಗ್ಗೆ ಸೋನಿ ಟಿವಿಯಲ್ಲಿ ಮಾತನಾಡಿದ ಅಜಯ್ ಜಡೇಜಾ, ಒಬ್ಬ ಆಟಗಾರ ಬೆರಳಿಗೆ ಗಾಯಮಾಡಿಕೊಂಡರೆ 10 ದಿನಗಳ ಕಾಲ ಬ್ಯಾಟ್ ಮಾಡಲಾಗುವುದಿಲ್ಲ. ಹಾಗೊಂದು ವೇಳೆ ಗುಣಮುಖರಾದರೂ ಮರುದಿನವೇ ಆಡುವುದು ಸರಿಯಲ್ಲ. ಅದಾಗಿ 15 ದಿನ ಕಾಯಬೇಕು. ಹೀಗಾಗಿ ರಾಹುಲ್ ವಿಚಾರದಲ್ಲಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಾರದು ಕಾಯಂ ಪರಿಹಾರ ಹುಡುಕಬೇಕು. ಅದಕ್ಕಾಗಿ ರೋಹಿತ್ ಶರ್ಮ ಮನೆಯಲ್ಲಿಯೇ ಉಳಿಯಬೇಕು, ಎಂದು ಹೇಳಿದ್ದಾರೆ.
ಇದನ್ನೂ ಓದಿ | INDvsBAN | ಎರಡನೇ ಟೆಸ್ಟ್ಗೆ ಶುಬ್ಮನ್ ಗಿಲ್ ಔಟ್?; ಸುಳಿವು ಕೊಟ್ಟ ಕೆ ಎಲ್ ರಾಹುಲ್