ದುಬೈ: ಐಸಿಸಿ ನೂತನ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ(Test bowling rankings) ಇಂಗ್ಲೆಂಡ್ ತಂಡದ ಸ್ಟಾರ್ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್(James Anderson) ನಂ.1 ಸ್ಥಾನಕ್ಕೇರಿದ್ದಾರೆ. ಇದುವರೆಗೆ ಅಗ್ರ ಶ್ರೇಯಾಂಕದಲ್ಲಿದ್ದ ಆಸೀಸ್ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್(Pat Cummins) ಮೂರನೇ ಸ್ಥಾನ್ಕಕೆ ಜಾರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಪ್ರಸಕ್ತ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಭಾರತದ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್(Ravichandran Ashwin) ಸದ್ಯ 864 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಆಂಡರ್ಸನ್ಗಿಂತ ಕೇವಲ ಎರಡು ರೇಟಿಂಗ್ ಅಂಕ ಹಿಂದಿರುವ ಅಶ್ವಿನ್ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ನಂ.1 ಸ್ಥಾನಕ್ಕೇರುವ ಎಲ್ಲ ಅವಕಾಶಗಳಿವೆ.
40 ವರ್ಷದ ಜೇಮ್ಸ್ ಆ್ಯಂಡರ್ಸನ್ ಕಳೆದ ವಾರ ಮೌಂಟ್ ಮೌಂಗನುಯಿಯಲ್ಲಿ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಪಡೆದು ಮಿಂಚಿದ್ದರು. ಈ ಸಾಧನೆಯಿಂದ ಅವರು ನಂ.1 ಸ್ಥಾನಕ್ಕೆ ಏರಿದ್ದಾರೆ. ಒಟ್ಟಾರೆಯಾಗಿ ಆ್ಯಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆರನೇ ಬಾರಿಗೆ ಅಗ್ರಸ್ಥಾನಕ್ಕೇರಿದ ಬೌಲರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ Women’s T20 World Cup: ಸೆಮಿಯಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ!
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ಆಸೀಸ್ ನಾಯಕ ನಂ.1 ಸ್ಥಾನದಿಂದ ಕೆಳಗಿಳಿದಿದ್ದಾರೆ. ಸದ್ಯ ಕಮಿನ್ಸ್ 858 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ, ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಬರೋಬ್ಬರಿ 7 ಸ್ಥಾನ ಮೇಲೇರಿ ಒಂಬತ್ತನೇ ಸ್ಥಾನವನ್ನು ತಲುಪಿದ್ದಾರೆ. ಜತೆಗೆ ಅಕ್ಷರ್ ಪಟೇಲ್ ಟೆಸ್ಟ್ ಆಲ್‌ರೌಂಡರ್ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ.