ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಕೇಪ್ ಟೌನ್ ಟೆಸ್ಟ್ ಗೆಲುವು ಸಾಧಿಸಿ ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ(Test Rankings) ಗಮನಾರ್ಹ ಪ್ರಗತಿ ಸಾಧಿಸಿದ್ದ ವಿರಾಟ್ ಕೊಹ್ಲಿ(Virat Kohli) ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ.
ಕಳೆದ ವಾರ ಪ್ರಕಟಗೊಂಡಿದ್ದ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕೊಹ್ಲಿ ಮೂರು ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಒಂದು ಸ್ಥಾನಗಳ ಕುಸಿತ ಕಂಡು 7ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವ ಕೊಹ್ಲಿ ಅಂತಿಮ ಮೂರು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ತಮ್ಮ ಶ್ರೇಯಾಂಕವನ್ನು ಮತ್ತೆ ಹೆಚ್ಚಿಸಿಕೊಳ್ಳಬಹುದು.
ಆಸ್ಟ್ರೇಲಿಯಾದ ಎಡಗೈ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರು ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾರಣ ಅವರು ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರೀ ಪ್ರಗತಿ ಸಾಧಿಸಿದ್ದಾರೆ. 7 ಸ್ಥಾನಗಳ ಜಿಗಿತದೊಂದಿಗೆ 5ನೇ ಸ್ಥಾನಕ್ಕೇರಿದ್ದಾರೆ. ಟಾಪ್ 5 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೂರುವ ಆಸೀಸ್ ಬ್ಯಾಟರ್ಗಳೇ ಕಾಣಿಸಿಕೊಂಡಿದ್ದಾರೆ.
10ನೇ ಸ್ಥಾನದಲ್ಲಿದ್ದ ಭಾರತದ ನಾಯಕ ರೋಹಿತ್ ಶರ್ಮಾ(Rohit Sharma) ಕೂಡ ತಮ್ಮ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಸದ್ಯ 748 ರೇಟಿಂಗ್ ಅಂಕದೊಂದಿಗೆ 11ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IND vs ENG: ಶತಕ ಬಾರಿಸುವ ನಿರೀಕ್ಷೆಯಲ್ಲಿ ಯಶಸ್ವಿ ಜೈಸ್ವಾಲ್
ಅಗ್ರಸ್ಥಾನದಲ್ಲೇ ಮುಂದುವರಿದ ವಿಲಿಯಮ್ಸನ್
ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ತಮ್ಮ ಅಗ್ರಸ್ಥಾನವನ್ನು ಈ ಬಾರಿಯೂ ಉಳಿಸಿಕೊಂಡಿದ್ದಾರೆ. 864 ರೇಟಿಂಗ್ ಅಂಕದೊಂದಿಗೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ನ ಜೋ ರೂಟ್ 859 ರೇಟಿಂಗ್ ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 807 ರೇಟಿಂಗ್ ಅಂಕ ಗಳಿಸಿರುವ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಸ್ಟೀವನ್ ಸ್ಮಿತ್ ಮೂರನೇ ಸ್ಥಾನದಲ್ಲಿದ್ದಾರೆ. ಆಸೀಸ್ ತಂಡದ ಮತೋರ್ವ ಬ್ಯಾಟರ್ ಮಾರ್ನಸ್ ಲಬುಶೇನ್ 787 ರೇಟಿಂಗ್ ಅಂದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ಶ್ರೇಯಾಂಕದಲ್ಲಿ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ 863 ರೇಟಿಂಗ್ ಅಂಕದೊಂದಿಗೆ ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಮೊಹಮ್ಮದ್ ಸಿರಾಜ್(Mohammed Siraj) 17ನೇ ಸ್ಥಾನದಲ್ಲೇ ಕಾಣಿಸಿಕೊಂಡಿದ್ದಾರೆ. ಅವರು ಕಳೆದ ವಾರ 13 ಸ್ಥಾನಗಳ ಏರಿಕೆ ಕಂಡು ಈ ಸ್ಥಾನಕ್ಕೇರಿದ್ದರು. ಜಸ್ಪ್ರೀತ್ ಬುಮ್ರಾ(Jasprit Bumrah) ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಕೂಡ ಕುಸಿತ ಕಂಡು 6ನೇ ಸ್ಥಾನದಲ್ಲಿ ಕಾಣಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಮತ್ತು ದಕ್ಷಿಣ ಆಫ್ರಿಕಾದ ಕಗೊಸೊ ರಬಾಡ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ಗಳ ಪಟ್ಟಿಯಲ್ಲಿ 434 ರೇಟಿಂಗ್ ಅಂಕ ಹೊಂದಿರುವ ರವೀಂದ್ರ ಜಡೇಜಾ ಮೊದಲ ಸ್ಥಾನ ಪಡೆದಿದ್ದಾರೆ. 341 ರೇಟಿಂಗ್ ಅಂಕ ಪಡೆದಿರುವ ಆರ್. ಅಶ್ವಿನ್ಗೆ ದ್ವಿತೀಯ ಸ್ಥಾನ. ಈ ಮೂಲಕ ಆಲ್ರೌಂಡರ್ಗಳ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳು ಭಾರತೀಯರ ಪಾಲಾಗಿದೆ.