Site icon Vistara News

Test Rankings: ಟೆಸ್ಟ್​ ಶ್ರೇಯಾಂಕದಲ್ಲಿ ಭಾರಿ ಜಿಗಿತ​ ಕಂಡ ಯಶಸ್ವಿ ಜೈಸ್ವಾಲ್

Yashasvi Jaiswal soaks in the moment after scoring his century

ದುಬೈ: ಭಾರತ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿ ಮುಗಿದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಶ್ರೇಯಾಂಕವನ್ನು(ICC Test Rankings) ಬುಧವಾರ ಪ್ರಕಟಿಸಿದೆ. ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಮೊಹಮ್ಮದ್​ ಸಿರಾಜ್(Mohammed Siraj)​ ಮತ್ತು ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ಉತ್ತಮ ಪ್ರಗತಿ ಸಾಧಿಸಿದ್ದಾರೆ.

ವಿಂಡೀಸ್​ ವಿರುದ್ಧದ ಎರಡು ಟೆಸ್ಟ್​ ಸರಣಿಯಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿ ಮಿಂಚಿದ್ದ ನಾಯಕ ರೋಹಿತ್​ ಅವರು ಒಂದು ಸ್ಥಾನ ಜಿಗಿತ ಕಂಡು 9ನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ 10ನೇ ಸ್ಥಾನದಲ್ಲಿದ್ದರು. ಜೈಸ್ವಾಲ್ ಬರೋಬ್ಬರಿ 11 ಸ್ಥಾನಗಳ ಪ್ರಗತಿ ಕಂಡು​ ಜೀವಮಾನ ಶ್ರೇಷ್ಠ 63ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್​ ಆಡದೆ ನಂ.1 ಸ್ಥಾನ ಪಡೆದಿದ್ದ ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್(Kane Williamson)​ ನೂತನ ಶ್ರೇಯಾಂಕದಲ್ಲಿಯೂ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮಾರ್ನಸ್​ ಲಬುಶೇನ್​ ದ್ವಿತೀಯ ಮತ್ತು ಜೋ ರೂಟ್​ ಮೂರನೇ ಸ್ಥಾನ ಪಡೆದಿದ್ದಾರೆ.

ರಿಷಭ್​ ಪಂತ್(Rishabh Pant) ಒಂದು ಸ್ಥಾನ ಕುಸಿತ ಕಂಡು 12ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಸುಮಾರು 7 ತಿಂಗಳಿನಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಪಂತ್​ ಕಳೆದ ವಾರದವರೆಗೂ 10ನೇ ಸ್ಥಾನದಲ್ಲೇ ಮುಂದುವರಿದಿದ್ದರು. ಆದರೆ ರೋಹಿತ್ ಶತಕ ಬಾರಿಸಿದ ಪರಿಣಾಮ ಪಂತ್​ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ರೋಹಿತ್​ ಹೊರತುಪಡಿಸಿ ಉಳಿದ ಯಾವುದೇ ಟೀಮ್​ ಇಂಡಿಯಾ ಬ್ಯಾಟರ್​ ಕೂಡ ಅಗ್ರ 10ರೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ದ್ವಿತೀಯ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ 76ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ ವಿರಾಟ್​ ಕೊಹ್ಲಿ 14ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಬೌಲಿಂಗ್​ ಶ್ರೇಯಾಂಕದಲ್ಲಿ ಆರ್​. ಅಶ್ವಿನ್(Ravichandran Ashwin) ಅವರು ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ರೇಟಿಂಗ್​ ಅಂಕದಲ್ಲಿ ಕುಸಿತ ಕಂಡಿದ್ದಾರೆ. ಕಳೆದ ಶ್ರೇಯಾಂಕ ಪಟ್ಟಿ ಬಿಡುಗಡೆ ವೇಳೆ ಅಶ್ವಿನ್​ ಅವರ ರೇಟಿಂಗ್​ ಅಂಕ 884 ಇತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಹೆಚ್ಚಿನ ವಿಕೆಟ್​ ಪಡೆಯದ ಕಾರಣ ಅವರ ರೇಟಿಂಗ್​ ಕುಸಿತಗೊಂಡಿದೆ. ಸದ್ಯ ಅವರು 879ಕ್ಕೆ ಇಳಿದಿದೆ. ದ್ವಿತೀಯ ಸ್ಥಾನದಲ್ಲಿದ್ದ ಆಸೀಸ್​ ವೇಗಿ ಪ್ಯಾಟ್ ಕಮಿನ್ಸ್​ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ IND vs WI 1st ODI: ಭಾರತಕ್ಕೆ ಸಡ್ಡು ಹೊಡೆದೀತೆ ವಿಂಡೀಸ್​?

ಆಲ್​ ರೌಂಡರ್​ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ(Ravindra Jadeja) ಅಗ್ರ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಬೌಲಿಂಗ್​ ಶ್ರೇಯಾಂಕದಲ್ಲಿಯೂ ಒಂದು ಸ್ಥಾನಗಳ ಪ್ರಗತಿ ಕಂಡು 6ನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್​ ಸಿರಾಜ್​(Mohammed Siraj) 5 ಸ್ಥಾನ ಮೇಲೇರಿ 33ನೇ ಸ್ಥಾನದಲ್ಲಿದ್ದಾರೆ.

Exit mobile version