ಬ್ಯಾಂಕಾಕ್: ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್(Thailand Open) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬಿ.ಸಾಯಿ ಪ್ರಣೀತ್(sai praneeth) ಮತ್ತು ಕಿರಣ್ ಜಾರ್ಜ್ ಅವರು ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಾಯಿ ಪ್ರಣೀತ್ 21-13, 21-14 ನೇರ ಗೇಮ್ಗಳಿಂದ ಡೆನ್ಮಾರ್ಕ್ನ ಮ್ಯಾಡ್ಸ್ ಕ್ರಿಸ್ಟೊಫರ್ಸನ್ ಅವರನ್ನು ಮಣಿಸಿದರು. ಉಭಯ ಆಟಗಾರ ಈ ಹೋರಾಟ 31 ನಿಮಿಷಗಳಲ್ಲಿ ಮುಕ್ತಾಯ ಕಂಡಿತು.
ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಹಣಾಹಣಿಯಲ್ಲಿ ಕಿರಣ್ ಕಠಿಣ ಪೈಪೋಟಿ ನೀಡಿ ಗೆಲುವು ದಾಖಲಿಸಿದರು. ಚೀನಾ ತೈಪೆಯ ಲೀ ಚಿಯಾ ಹಾವೊ ಅವರನ್ನು 21-17, 19-21, 23-21 ಗೇಮ್ಗಳಿಂದ ಹಿಮ್ಮೆಟ್ಟಿಸಿದರು. ಆದರೆ ಸಮೀರ್ 14-21, 16-21ರಿಂದ ಚೀನಾದ ಶಿ ಫೆಂಗ್ ಎದುರು, ಪ್ರಿಯಾಂಶು 21-14, 19-21, 25-27ರಿಂದ ದಕ್ಷಿಣ ಕೊರಿಯಾದ ಕ್ವಾಂಗ್ ಹೀ ಹಿಯೊ ವಿರುದ್ಧ, ಮಿಥುನ್ 18-21, 12-21ರಿಂದ ಜಪಾನ್ನ ಕೆಂಟಾ ನಿಶಿಮೊಟೊ ಎದುರು ನಿರಾಸೆ ಅನುಭವಿಸಿದರು.
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಸ್ಮಿತಾ ಚಲಿಹಾ 21-16, 21-19ರಿಂದ ಭಾರತದವರೇ ಆದ ಅನುಪಮಾ ಉಪಾಧ್ಯಾಯ ಅವರನ್ನು ಸೋಲಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು. ಡಬಲ್ಸ್ನಲ್ಲಿ ಸಿಮ್ರಾನ್ ಸಿಂಘಿ- ರಿತಿಕಾ ಟಕ್ಕರ್ 8-21, 10-21ರಿಂದ ಚೀನಾದ ಶೆಂಗ್ ಶು ಮತ್ತು ಶು ಚಿಯಾನ್ ಜಾಂಗ್ ಎದುರು ಪರಾಭವಗೊಂಡರು.