ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಬಂದಿದೆ. ಕಿರಣ್ ಜಾರ್ಜ್,ಅಶ್ಮಿತಾ ಚಾಲಿಹ, ಸೈನಾ ನೆಹ್ವಾಲ್ ಗೆಲುವು ಕಂಡರೆ ಪಿ.ವಿ ಸಿಂಧು, ಕೆ. ಶ್ರೀಕಾಂತ್, ಬಿ. ಸಾಯಿ ಪ್ರಣೀತ್, ಪ್ರಿಯಾಂಶು ರಾಜಾವತ್, ಸಮೀರ್ ವರ್ಮ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಬುಧವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 9ನೇ ಶ್ರೇಯಾಂಕದ ಆಟಗಾರ ಕಿರಣ್ ಜಾರ್ಜ್ ಚೀನದ ನಂ.1 ಶಟ್ಲರ್ ಶಿ ಯುಕಿ ಅವರನ್ನು 21-18, 22-20ರಿಂದ ಹಿಮ್ಮಟಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಒಡಿಶಾ ಓಪನ್ ಚಾಂಪಿಯನ್ ಆಗಿರುವ ಕಿರಣ್ ಜಾರ್ಜ್ ಅವರ ಬ್ಯಾಡ್ಮಿಂಟನ್ ಬಾಳ್ವೆಯಲ್ಲಿ ಸಾಧಿಸಿದ ದೊಡ್ಡ ಗೆಲುವು ಇದಾಗಿದೆ. ಶಿ ಯುಕಿ 2018ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಆಟಗಾರನಾಗಿದ್ದಾರೆ. ಆದರೆ ಈ ಟೂರ್ನಿಯಲ್ಲಿ ಭಾರತದ ಯುವ ಆಟಗಾರನ ಮುಂದೆ ಅವರ ಆಟ ನಡೆಯಲಿಲ್ಲ. ಅದು ಕೂಡ ನೇರ ಗೇಮ್ಗಳಿಂದ ಹೀನಾಯ ಸೋಲು ಕಂಡರು. ಕಿರಣ್ ಮುಂದಿನ ಸುತ್ತಿನಲ್ಲಿ ಚೀನದ ವೆಂಗ್ ಹಾಂಗ್ ಯಾಂಗ್ ಸವಾಲು ಎದುರಿಸಲಿದ್ದಾರೆ.
ಸೈನಾ ಮುನ್ನಡೆ
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಆರಂಭಿಕ ಪಂದ್ಯಗಳಲ್ಲಿ ಅಶ್ಮಿತಾ ಚಾಲಿಹ, ಸೈನಾ ನೆಹ್ವಾಲ್ ಗೆಲುವು ಸಾಧಿಸಿದ್ದಾರೆ. ಅಶ್ಮಿತಾ ಅವರು ಭಾರತದವರೇ ಆದ ಮಾಳವಿಕಾ ಬನ್ಸೋಡ್ ವಿರುದ್ಧ 21-17, 21-14 ಅಂತರದಿಂದ ಗೆಲುವು ಸಾಧಿಸಿದರು. ಸೈನಾ ನೆಹ್ವಾಲ್ ಕೆನಡಾದ ವೆನ್ ಯು ಜಾಂಗ್ ಅವರನ್ನು 21-13, 21-7 ಅಂತರದಿಂದ ಮಣಿಸಿದರು. ಆದರೆ ಕಳೆದ ವಾರ ಮುಕ್ತಾಯ ಕಂಡಿದ್ದ ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಸಿಂಧು ಅವರು ಈ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದರು. ಕೆನಡಾದ ಮಿಚೆಲ್ ಲೀ ಎದುರು 21-8,18-21, 21-18 ಗೇಮ್ಗಳ ಅಂತದಿಂದ ಪರಾಭವಗೊಂಡರು.
ಅಶ್ಮಿತಾ ಚಾಲಿಹ ಅವರು ಮುಂದಿನ ಸುತ್ತಿನಲ್ಲಿ ರಿಯೋ ಒಲಿಂಪಿಕ್ಸ್ ಬಂಗಾರ ಪದಕ ವಿಜೇತೆ, ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರನ್ನು ಎದುರಿಸಬೇಕಿದೆ. ಈ ಸವಾಲು ಗೆದ್ದರೆ ಇವರ ಮೇಲೆ ಪದಕ ಬರವಸೆಯೊಂದನ್ನು ಇಡಬಹುದಾಗಿದೆ. ಸೈನಾ ನೆಹ್ವಾಲ್ ಚೀನದ ಹಿ ಬಿಂಗ್ ಜಿಯಾವೊ ಅವರನ್ನು ಎದುರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ Malaysia Masters: ಪ್ರಣಯ್ ಫೈನಲ್ಗೆ; ಭಾರತಕ್ಕೆ ಒಂದು ಪದಕ ಖಾತ್ರಿ
ಉಳಿದಂತೆ ಪುರುಷರ ಸಿಂಗಲ್ಸ್ ನಲ್ಲಿ ಕೆ. ಶ್ರೀಕಾಂತ್, ಬಿ. ಸಾಯಿ ಪ್ರಣೀತ್, ಪ್ರಿಯಾಂಶು ರಾಜಾವತ್, ಸಮೀರ್ ವರ್ಮ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಕೆ. ಶ್ರೀಕಾಂತ್ ಅವರನ್ನು ಚೀನದ ವೆಂಗ್ ಹಾಂಗ್ ಯಾಂಗ್ 21-8, 16-21, 21-14ರಿಂದ ಮಣಿಸಿದರು. ವೆಂಗ್ ಕಳೆದ ವಾರವಷ್ಟೇ ಮಲೇಷ್ಯಾ ಮಾಸ್ಟರ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. ಬಿ. ಸಾಯಿ ಪ್ರಣೀತ್ ಅವರನ್ನು ಫ್ರಾನ್ಸ್‌ನ ಕ್ರಿಸ್ಟೊ ಪೊಪೋವ್ 21-14, 21-16 ನೇರ ಗೇಮ್‌ಗಳಲ್ಲಿ ಮಣಿಸಿದರು. ಸಮೀರ್ ವರ್ಮ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನ್ಸೆನ್ ಎದುರು 21-15, 21-15ರಿಂದ ಸೋಲು ಕಂಡರು.