ಬ್ಯಾಂಕಾಕ್: ಥಾಯ್ಲೆಂಡ್ ಓಪನ್(Thailand Open 2024) ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿ ಇಂದು(ಮಂಗಳವಾರ) ಆರಂಭಗೊಳ್ಳಲಿದ್ದು ಲಕ್ಷ್ಯ ಸೇನ್ ಮತ್ತು ಪಿ.ವಿ. ಸಿಂಧು(PV Sindhu) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಭಾರತದ ಸ್ಟಾರ್ ಶಟ್ಲರ್‌ಗಳಾದ, ಅಗ್ರ ಶ್ರೇಯಾಂಕದ ಚಿರಾಗ್ ಶೆಟ್ಟಿ(Chirag Shetty)-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ(Satwiksairaj Rankireddy) ಜೋಡಿ ಮೇಲೆ ಪದಕ ಭರವಸೆ ಇರಿಸಲಾಗಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್, ಕಿರಣ್ ಜಾರ್ಜ್, ಸತೀಶ್ ಕುಮಾರ್ ಸೆಣಸಲಿದ್ದಾರೆ. ಚಿರಾಗ್ ಮತ್ತು ಸಾತ್ವಿಕ್ ಮಲೇಷ್ಯಾದ ನೂರ್ ಮೊಹಮ್ಮದ್ ಅಝ್ರೀನ್ ಅಯೂಬ್ ಅಝ್ರೀನ್-ಟಾನ್ ವೀ ಕಿಯೋಂಗ್ ವಿರುದ್ಧ ಆಡಲಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿದ್ದ ಥಾಮಸ್ ಕಪ್‌ನಲ್ಲಿ ಭಾರತೀಯ ಜೋಡಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇದೀಗ ಥಾಯ್ಲೆಂಡ್ ಟೂರ್ನಿಯಲ್ಲಿ ತಮ್ಮ ಹಿಂದಿನ ಲಯಕ್ಕೆ ಮರಳಿ ಇದೇ ಜುಲೈನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಟೂರ್ನಿಗೆ ಸಿದ್ದಗೊಳ್ಳಬೇಕಿದೆ. ಒಲಿಂಪಿಕ್ಗೆ ಅರ್ಹತೆ ಪಡೆದ ಶಟ್ಲರ್ಗಳಿಗೆ ಈ ಟೂರ್ನಿ ತಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಲು ಒಳ್ಳೆಯ ಅವಕಾಶವಾಗಿದೆ.
ಸಿಂಧು ಅನುಪಸ್ಥಿತಿಯಲ್ಲಿ, ಅಶ್ಮಿತಾ ಚಲಿಹಾ, ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಮಾಳವಿಕಾ ಅಗ್ರ ಶ್ರೇಯಾಂಕದ ಚೀನಾದ ಹಾನ್ ಯುಯೆ ಮತ್ತು ಆಕರ್ಷಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಾಡಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ, ಪ್ಯಾರಿಸ್ ಗೇಮ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ನಾಲ್ಕನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಕೂಡ ಕಣದಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಪಡೆದ ಕಾರಣ ಈ ಜೋಡಿ ಎರಡನೇ ಸುತ್ತಿನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ಇದನ್ನೂ ಓದಿ India Open 2024 Final: ಇಂಡಿಯಾ ಓಪನ್ ಫೈನಲ್ನಲ್ಲಿ ಚಿರಾಗ್-ಸಾತ್ವಿಕ್ ಜೋಡಿಗೆ ಸೋಲು
ಪ್ಯಾರಿಸ್ ಒಲಿಂಪಿಕ್ಸ್ಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಇರುವ ಕಾರಣದಿಂದ ಅವರು ಕಠಿಣ ಅಭ್ಯಾಸದ ಮೊರೆ ಹೋಗಿರುವ ಕಾರಣ ಅವಳಿ ಒಪಿಂಪಿಕ್ ಪದಕ ವಿಜೇತೆ ಸಿಂಧು ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪ್ರತಿಷ್ಠಿತ ಉಬರ್ ಕಪ್(Uber Cup) ಟೂರ್ನಿಯಿಂದಲೂ ಸಿಂಧು ಹೊರಗುಳಿದಿದ್ದರು. ಸಿಂಧು ಟೋಕಿಯೊ ಒಲಿಂಪಿಕ್ಸ್ ಬಳಿಕ ಆಡಿದ ಎಲ್ಲ ಪ್ರಮುಖ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಾಣುತ್ತಲೇ ಬಂದಿದ್ದಾರೆ. ಅದರಲ್ಲೂ ಕಳೆದ ಒಂದು ವರ್ಷಗಳಲ್ಲಿ ನಡೆದ ಟೂರ್ನಿಗಳಲ್ಲಿ ದ್ವಿತೀಯ ಹಂತಕ್ಕೆ ಏರಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು.
40 ವರ್ಷದ ಹಫೀಜ್ ಅವರ ಬಳಿ ಸಿಂಧು ಕೆಲ ತಿಂಗಳುಗಳ ಹಿಂದೆಯೇ ತರಬೇತಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಸಿಂಧು ಅವರು ಹಫೀಜ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಲಯ ಕಂಡುಕೊಳ್ಳುವ ಮೂಲಕ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಂತಾಗಲಿ ಎನ್ನುವುದು ಸಿಂಧು ಅಭಿಮಾನಿಗಳ ಆಶಯವಾಗಿದೆ.