ಅಹಮದಾಬಾದ್: ಉದ್ಘಾಟನಾ ಆವೃತ್ತಿಯ ಮಹಿಳೆಯರ ಸೂಪರ್ ಲೀಗ್ನಲ್ಲಿ (WPL 2023) ಗುಜರಾತ್ ಜಯಂಟ್ಸ್ ತಂಡದ ನಾಯಕಿಯಾಗಿ ಆಸ್ಟ್ರೇಲಿಯಾ ತಂಡದ ಆಟಗಾರ್ತಿ ಬೆತ್ ಮೂನಿ ಆಯ್ಕೆಯಾಗಿದ್ದಾರೆ. ಅವರು ಫೆಬ್ರವರಿ 26ರಂದು ಮುಕ್ತಾಯಗೊಂಡ ಮಹಿಳೆಯರ ಟಿ20 ವಿಶ್ವ ಕಪ್ನ ಚಾಂಪಿಯನ್ ತಂಡ ಆಸ್ಟ್ರೇಲಿಯಾದ ಆಡುವ 11ರ ಬಳಗದಲ್ಲಿದ್ದರು. ಇದೇ ವೇಳೆ ಭಾರತ ತಂಡದ ಆಲ್ರೌಂಡರ್ ಸ್ನೇಹಾ ರಾಣಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಬೆತ್ಮೂನಿ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದರಲ್ಲದೆ, ಪಂದ್ಯ ಶ್ರೇಷ್ಠ ಪುರಸ್ಕಾರ ತಮ್ಮದಾಗಿಸಿಕೊಂಡಿದ್ದರು. ಅವರನ್ನು ಫೆಬ್ರವರಿ 13ರಂದು ನಡೆದ ಡಬ್ಲ್ಯುಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗುಜರಾತ್ ಜಯಂಟ್ಸ್ ಫ್ರಾಂಚೈಸಿ 2 ಕೋಟಿ ರೂಪಾಯಿಗಳಿಗೆ ತನ್ನದಾಗಿಸಿಕೊಂಡಿತ್ತು. ಗುಜರಾತ್ ತಂಡದಲ್ಲಿ ಟಿ20 ವಿಶ್ವ ಕಪ್ನ ಸರಣಿ ಶ್ರೇಷ್ಠ ಆಟಗಾರ್ತಿ ಆಶ್ಲೇ ಗಾರ್ಡ್ನರ್ ಕೂಡ ಇದ್ದಾರೆ. ಅವರನ್ನು 3.2 ಕೋಟಿ ರೂಪಾಯಿಗಳಿಗೆ ಗುಜರಾತ್ ತಂಡ ತನ್ನದಾಗಿಸಿಕೊಂಡಿತ್ತು.
ಗುಜರಾತ್ ತಂಡದ ಟ್ವೀಟ್ ಈ ರೀತಿ ಇದೆ
ಗುಜರಾತ್ ಜಯಂಟ್ಸ್ ತಂಡದ ಮಾಲೀಕತ್ವವನ್ನು ಅದಾನಿ ಸ್ಪೋರ್ಟ್ಸ್ಲೈನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೊಂದಿದೆ. ಈ ತಂಡವು ಕೆಲವೇ ದಿನಗಳ ಹಿಂದೆ ತನ್ನ ತಂಡದ ಜರ್ಸಿಯನ್ನು ಬಿಡುಗಡೆ ಮಾಡಿತ್ತು. ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ್ತಿ ರಾಚೆಲ್ ಹೇನ್ಸ್ ತಂಡದ ಹೆಡ್ ಕೋಚ್ ಆಗಿದ್ದು, ತುಷಾರ್ ಅರೋಥೆ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ನೂಶಿನ್ ಅಲ್ ಖದೀರ್ ಬೌಲಿಂಗ್ ಕೋಚ್ ಆಗಿದ್ದಾರೆ.
ಇದನ್ನೂ ಓದಿ : T20 World Cup : ದಕ್ಷಿಣ ಆಫ್ರಿಕಾ ಮಣಿಸಿ 6ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾದ ಮಹಿಳೆಯರು
ಬೆತ್ಮೂನಿ 2016ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದು, 83 ಟಿ20 ಪಂದ್ಯಗಳಲ್ಲಿ 2350 ರನ್ ಬಾರಿಸಿದ್ದಾರೆ. 40.51 ಸರಾಸರಿ ಹಾಗೂ 124.60 ಸ್ಟ್ರೈಕ್ರೇಟ್ ಪ್ರಕಾರ ಬ್ಯಾಟ್ ಬೀಸಿರುವ ಅವರು ಎರಡು ಶತಕಗಳನ್ನು ಹೊಡೆದಿದ್ದಾರೆ. ಗರಿಷ್ಠ ಸ್ಕೋರ್ ಅಜೇಯ 117. ಮೆಗ್ಲ್ಯಾನಿಂಗ್ ಅವರ ಅಲಭ್ಯತೆಯಲ್ಲಿ ತಂಡದ ನಾಯಕತ್ವ ವಹಿಸುವ ಅವರು ವಿಕೆಟ್ಕೀಪಿಂಗ್ ಕೂಡ ಮಾಡಬಲ್ಲರು.