Site icon Vistara News

The Ashes 2023: ಸ್ಟಾರ್ಕ್​ ದಾಳಿಗೆ ಕುಸಿದ ಇಂಗ್ಲೆಂಡ್​; ಹಿಡಿತ ಸಾಧಿಸಿದ ಆಸೀಸ್

James Anderson and Ben Stokes chat at the top of his mark

ಓವಲ್‌: ಆ್ಯಶಸ್​ ಸರಣಿಯ(The Ashes 2023) ಅಂತಿಮ ಟೆಸ್ಟ್​ ಪಂದ್ಯದ(England vs Australia, 5th Test) ಮೊದಲ ದಿನವೇ ಆತಿಥೇಯ ಇಂಗ್ಲೆಂಡ್​ ತಂಡ ಪ್ರವಾಸಿ ಆಸೀಸ್​ ಬೌಲಿಂಗ್​ ದಾಳಿಗೆ ನಲುಗಿ 283 ರನ್ನಿಗೆ ಆಲೌಟಾಗಿದೆ. ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ 61 ರನ್​ಗೆ ಒಂದು ವಿಕೆಟ್​ ಕಳೆದುಕೊಂಡು ದ್ವಿತೀಯ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಇಂಗ್ಲೆಂಡ್​ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಜಾಕ್‌ ಕ್ರಾಲಿ ಮತ್ತು ಬೆನ್‌ ಡಕೆಟ್‌ ಮೊದಲ ವಿಕೆಟಿಗೆ 62 ರನ್‌ ಪೇರಿಸಿದರು. ಆದರೆ ಉಭಯ ಆಟಗಾರರು ನಾಲ್ಕು ರನ್‌ ಅಂತರದಲ್ಲಿ ವಿಕೆಟ್​ ಕಳೆದುಕೊಂಡ ಬಳಿಕ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡಿತು. ಮಿಚೆಲ್‌ ಸ್ಟಾರ್ಕ್‌, ಹ್ಯಾಝಲ್​ವುಡ್​ ಮತ್ತು ಟಾಡ್‌ ಮರ್ಫಿ ಅವರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌, ಮೊಯಿನ್​ ಅಲಿ ಮತ್ತು ಅಂತಿಮ ಹಂತದಲ್ಲಿ ಕ್ರಿಸ್‌ ವೋಕ್ಸ್‌ ಸಣ್ಣ ಮಟ್ಟದ ಹೋರಾಟ ನಡೆಸಿದ ಪರಿಣಾಮ ತಂಡ ಸಾಧಾರಣ ಮೊತ್ತ ಪೇರಿಸಿತು.

ಹ್ಯಾರಿ ಬ್ರೂಕ್‌ ಮತ್ತು ಮೊಯಿನ್‌ ಅಲಿ ನಾಲ್ಕನೇ ವಿಕೆಟಿಗೆ 111 ರನ್‌ ಪೇರಿಸಿ ತಂಡಕ್ಕೆ ಆಸರೆಯಾದರು. ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದ ಬ್ರೂಕ್​ 91 ಎಸೆತಗಳಿಂದ 85 ರನ್‌ ಹೊಡೆದರು. ಈ ಇನಿಂಗ್ಸ್​ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಯಿತು. ಮೊಯಿನ್‌ 34 ಮತ್ತು ಕ್ರಿಸ್‌ ವೋಕ್ಸ್‌ 36 ರನ್​ ಬಾರಿಸಿದರು.

ಮೊದಲ ಇನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ ಪರ ಉಸ್ಮಾನ್​ ಖವಾಜ(26*) ಮತ್ತು ಮಾರ್ನಸ್​ ಲಬುಶೇನ್​(2*) ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಡೇವಿಡ್​ ವಾರ್ನರ್​ 24 ರನ್​ ಗಳಿಸಿ ಕ್ರಿಸ್ ವೋಕ್ಸ್​ಗೆ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ Ashes 2023 : ಐಪಿಎಲ್​ನಲ್ಲಿ ಫೇಲ್​, ಆ್ಯಶಸ್​​ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್​; ಇಂಗ್ಲೆಂಡ್​ ಬ್ಯಾಟರ್​ನ ಬ್ಯಾಡ್​ಲಕ್​!

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 283 (ಡಕೆಟ್‌ 41, ಮೊಯಿನ್‌ ಅಲಿ 24, ಹ್ಯಾರಿ ಬ್ರೂಕ್‌ 85, ವೋಕ್ಸ್‌ 36, ಮಿಚೆಲ್‌ ಸ್ಟಾರ್ಕ್‌ 82ಕ್ಕೆ 4, ಹ್ಯಾಝಲ್​ವುಡ್‌ 54ಕ್ಕೆ 2, ಮರ್ಫಿ 22ಕ್ಕೆ 2). ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ ಬ್ಯಾಟಿಂಗ್​(ಉಸ್ಮಾನ್​ ಖವಾಜ ಅಜೇಯ 26, ಲಬುಶೇನ್ ಅಜೇಯ 2, ಕ್ರಿಸ್ ವೋಕ್ಸ್ 8ಕ್ಕೆ 1).

Exit mobile version