ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಕಣಕ್ಕಿಳಿಯುವ ಮೂಲಕ ಸತತ ನೂರು ಟೆಸ್ಟ್ ಪಂದ್ಯಗಳನ್ನು ಆಡಿದ ವಿಶ್ವ ಮೊದಲ ಬೌಲರ್ ಎಂಬ ಖ್ಯಾತಿಗೆ ಭಾಜನರಾಗಿದ್ದ ಆಸ್ಟ್ರೇಲಿಯಾದ ಸ್ಪಿನ್ನರ್ ನಥಾನ್ ಲಿಯೋನ್(Nathan Lyon), ಪಂದ್ಯದ ಮಧ್ಯೆ ಗಾಯಗೊಂಡು ಆ್ಯಶಸ್ ಸರಣಿಯಿಂದಲೇ(The Ashes, 2023) ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕ್ಯಾಚ್ ಒಂದನ್ನು ಪಡೆಯುವ ವೇಳೆ ಲಿಯೋನ್ ಕಾಲಿಗೆ ಗಾಯಮಾಡಿಕೊಂಡರು. ಕಾಲಿನ ಹಿಮ್ಮಡಿಯ ಮೇಲಿನ ಮಾಂಸಖಂಡಕ್ಕೆ ಒತ್ತಡ ಬಿದ್ದು ತೀವ್ರ ನೋವಿಗೊಳದ ಅವರು ಮೈದಾನದಲ್ಲೇ ಕುಸಿದು ಬಿದ್ದರು. ತಕ್ಷಣ ಮೈದಾನಕ್ಕೆ ಬಂದ ವೈದ್ಯಕೀಯ ಸಿಬ್ಬಂದಿ ಅವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರು ಊರುಗೋಲಿನ ಸಹಾಯದಿಂದ ನಡೆದಾಡಿದ ಫೋಟೊ ಕಂಡು ಬಂದಿದೆ. ಸದ್ಯ ಅವರು ಈ ಸರಣಿಯಿಂದ ಹೊರಬಿಳುವುದು ಖಚಿತ ಎನ್ನಲಾಗಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಸತತ ನೂರನೇ ಟೆಸ್ಟ್ ಆಡಿದ ಮೊದಲ ಬೌಲರ್ ಎನಿಸಿಕೊಂಡಿದ್ದ ಅವರು ತಮ್ಮ ಈ ಸ್ಮರಣೀಯ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಗಾಯದ ಕುರಿತು ಮಾಹಿತಿ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, “ಲಿಯೋನ್ ಅವರು ಕೊಂಚ ಒತ್ತಡದಿಂದ ಬಳಲುತ್ತಿದ್ದಾರೆ. ಈ ಪಂದ್ಯ ಮುಗಿದ ಬಳಿಕ ಅವರಿಗೆ ಪುನರ್ವಸತಿ ಅವಧಿಯ ಅಗತ್ಯವಿದೆ. ಸರಣಿಯ ಉಳಿದ ಭಾಗಕ್ಕೆ ಅವರ ಲಭ್ಯತೆಯ ಬಗ್ಗೆ ನಿರ್ಧಾರವನ್ನು ಪಂದ್ಯದ ಕೊನೆಯಲ್ಲಿ ಪ್ರಕಟಿಸಲಾಗುವುದು. ಅವರು ಆಟಕ್ಕೆ ಮರಳುವುದು ಬಹುತೇಕ ಸಾಧ್ಯವಿಲ್ಲ” ಎಂದು ತಿಳಿಸಿದೆ.
ಲಿಯೋನ್ ಅವರು ಮುಂದಿನ ಪಂದ್ಯಗಳಿಗೆ ಅಲಭ್ಯರಾದರೆ ಇವರ ಬದಲಿಗೆ ಟಾಡ್ ಮರ್ಫಿ ಕಣಕ್ಕಿಳಿಯಬಹುದು. ಒಂದೊಮ್ಮೆ ಅವರಿಗೆ ಆಡುವ ಅವಕಾಶ ಸಿಕ್ಕರೆ ಇದು ಅವರ ಪದಾರ್ಪಣ ಆ್ಯಶಸ್ ಪಂದ್ಯವಾಗಲಿದೆ. 22 ವರ್ಷದ ಆಫ್-ಸ್ಪಿನ್ನರ್ ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಹಮನಾರ್ಹ ಪ್ರದರ್ಶನ ತೋರಿದ್ದರು. ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ ಪ್ರಮುಖ ಏಳು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಸದ್ಯ ಆಸೀಸ್ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ಮರ್ಫಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ Nathan Lyon: ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ನಥಾನ್ ಲಿಯೋನ್
ಆಸೀಸ್ಗೆ ಮುನ್ನಡೆ
ಐತಿಹಾಸಿಕ ಕ್ರಿಕೆಟ್ ಮೈದಾನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 221 ರನ್ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ನ 416 ರನ್ಗಳನ್ನು ಬೆನ್ನಟ್ಟಿದ ಇಂಗ್ಲೆಂಡ್ 325 ರನ್ಗಳಿಗೆ ಸರ್ವಪತನ ಕಂಡಿತು. ದ್ವಿತೀಯ ಇನಿಂಗ್ಸ್ನಲ್ಲಿ ಆಡುತ್ತಿರುವ ಆಸೀಸ್ 2 ವಿಕೆಟ್ನಷ್ಟಕ್ಕೆ 130 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.