ಮ್ಯಾಂಚೆಸ್ಟರ್: ಆ್ಯಶಸ್ ಸರಣಿಯ(The Ashes) 4ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಿಡಿತ ಸಾಧಿಸಿದೆ. ಜಾಕ್ ಕ್ರಾಲಿ(189) ಸ್ಫೋಟಕ ಶತಕ ಮತ್ತು ಜೋ ರೂಟ್(84) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ಗೆ 384 ರನ್ ಗಳಿಸಿ 67 ರನ್ ಮುನ್ನಡೆ ಸಾಧಿಸಿದೆ. ಆಸೀಸ್ 317 ರನ್ಗೆ ಆಲೌಟ್ ಆಗಿದೆ.
ಆಸ್ಟ್ರೇಲಿಯಾ ತಂಡವು 8 ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿದ್ದಲ್ಲಿಂದ ದ್ವಿತೀಯ ದಿನದ ಆಟ ಮುಂದುವರಿಸಿ ಕೇವಲ 18 ರನ್ ಗಳಿಸಿ ಸರ್ವಪತನ ಕಂಡಿತು. ಆಸೀಸ್ ತಂಡದ ಮೊದಲ ಇನಿಂಗ್ಸ್ನ 317 ರನ್ಗೆ ಪ್ರತಿಯಾಗಿ ಬ್ಯಾಟ್ ಮಾಡುತ್ತಿರುವ ಇಂಗ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ರನ್ ದಾಖಲಿಸಿದೆ.
ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಆಟಗಾರರು ಕೇವಲ ಒಂದು ದಿನದಾಟದಲ್ಲಿ ಬೃಹತ್ ಮೊತ್ತ ಪೇರಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದಾರೆ. ಇಂಗ್ಲೆಂಡ್ ಪರ ಕರಾರುವಾಕ್ಕಾಗಿ ಬೌಲಿಂಗ್ ಮಾಡಿದ ಕ್ರಿಸ್ ವೋಕ್ಸ್ 22.2 ಓವರ್ನಲ್ಲಿ 62 ರನ್ ಬಿಟ್ಟು ಕೊಟ್ಟು 5 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ರನ್ಗೆ ಕಡಿವಾಣ ಹಾಕಿದರು. ಸ್ಟುವರ್ಟ್ ಬ್ರಾಡ್ 2 ವಿಕೆಟ್, ಮಾರ್ಕ್ ವುಡ್ ಹಾಗೂ ಮೋಯಿನ್ ಅಲಿ ತಲಾ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ Ashes 2023: ಆ್ಯಶಸ್ ಟೆಸ್ಟ್ ಸರಣಿಯಿಂದ ಹೊರಬಿದ್ದ ನಥಾನ್ ಲಿಯೋನ್
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ಮಿಚೆಲ್ ಸ್ಟಾರ್ಕ್ ಆರಂಭಿಕ ಆಘಾತವಿಕ್ಕಿದರು. ಬೆನ್ ಡಕೆಟ್ ಅವರನ್ನು ಕೇವಲ ಒಂದು ರನ್ಗೆ ಪೆವಿಲಿಯನ್ಗೆ ಅಟ್ಟಿದರು. ಆದರೆ ಜಾಕ್ ಕ್ರಾಲಿ(Zak Crawley) ಆಸೀಸ್ ಬೌಲರ್ಗಳ ಮೇಲೆರಗಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 93 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು. ಒಟ್ಟಾರೆ 182 ಎಸೆತಗಳಿಂದ 189 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಅವರ ಈ ಸ್ಫೋಟಕ ಬ್ಯಾಟಿಂಗ್ ವೇಳೆ 21 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು.
A maiden #Ashes ton for Zak Crawley 👏#WTC25 | #ENGvAUS | 📝 https://t.co/ow2wlXs7Dk pic.twitter.com/gRnDXi6Y6c
— ICC (@ICC) July 20, 2023
ಮತ್ತೊಂದು ತುದಿಯಲ್ಲಿ ಕ್ರಾಲಿಗೆ ಉತ್ತಮ ಬ್ಯಾಟಿಂಗ್ ಸಾಥ್ ನೀಡಿದ ಜೋ ರೂಟ್(Joe Root) 95 ಎಸೆತಗಳಿಂದ 84 ರನ್ ಬಾರಿಸಿ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಮೊಯಿನ್ ಅಲಿ 54 ರನ್ ಗಳಿಸಿದರು. ಸದ್ಯ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 384 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಬೆನ್ ಸ್ಟೋಕ್ಸ್(24*) ಮತ್ತು ಹ್ಯಾರಿ ಬ್ರೂಕ್(14*) ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.