ಮೆಲ್ಬೋರ್ನ್ : ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ವಿಶ್ವ ಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ೮೨ ರನ್‌ಗಳು ಅವರ ವೃತ್ತಿ ಕ್ರಿಕೆಟ್ ಅತ್ಯಂತ ಸ್ಮರಣೀಯ ಇನಿಂಗ್ಸ್ ಆಗಿದೆ. ಈ ಸಾಧನೆ ಬಳಿಕ ವಿರಾಟ್ ಕೊಹ್ಲಿಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಅಂತೆಯೇ ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಕೂಡ ಕೊಹ್ಲಿಯ ಬ್ಯಾಟಿಂಗ್ ಪವರ್ ನೋಡಿ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಇದೇ ವೇಳೆ ಅವರು ಕಳೆದ ಹಲವು ತಿಂಗಳಿಂದ ವಿರಾಟ್ ಕೊಹ್ಲಿಯನ್ನು ಟೀಕಿಸುತ್ತಿದ್ದವರ ಕ್ರಿಕೆಟ್ ಜ್ಞಾನದ ಬಗ್ಗೆ ಮರುಕಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಎರಡು ವರ್ಷಗಳ ಫಾರ್ಮ್ ಕಳೆದುಕೊಂಡಿದ್ದರು. ಈ ವೇಳೆ ಶತಕದ ಬರ ಎದುರಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಹಿರಿಯ ಆಟಗಾರರನೇಕರು ಕೊಹ್ಲಿಯನ್ನು ಟೀಕೆ ಮಾಡಲು ಆರಂಭಿಸಿದ್ದರು. ಮಾಜಿ ಆಟಗಾರರಾದ ಸುನೀಲ್ ಗವಾಸ್ಕರ್ ಸೇರಿದಂತೆ ಹಲವರು ಸತತವಾಗಿ ಟೀಕೆಗೆ ಒಳಪಡಿಸಿದ್ದರು. ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರಂತೂ ದಿನ ಬೆಳಗ್ಗೆದ್ದರೆ ಗಂಭೀರ್ ಅವರನ್ನು ಟೀಕೆಗೆ ಒಳಪಡಿಸುತ್ತಿದ್ದರು. ಕಳೆದ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಏಕಾಏಕಿ ಫಾರ್ಮ್ ಕಂಡುಕೊಂಡ ಅವರು ಇದೀಗ ಭರ್ಜರಿಯಾಗಿ ಬ್ಯಾಟ್ ಬೀಸಲು ಆರಂಭಿಸಿದ್ದಾರೆ. ಅಂತೆಯೇ ಪಾಕ್ ವಿರುದ್ಧ ತಮ್ಮ ನೈಜ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬ್ರೆಟ್ ಲೀ “ವಿರಾಟ್ ಕೊಹ್ಲಿಯ ಸಾಮರ್ಥ್ಯದ ಮೇಲೆ ಸತತವಾಗಿ ಟೀಕೆ ಮಾಡಿರುವುದೇ ಅಚ್ಚರಿ ಎನಿಸುತ್ತದೆ. ಯಾರೆಲ್ಲ ಅವರನ್ನು ಟೀಕೆ ಮಾಡಿದ್ದಾರೋ ಅವರ್ಯಾರೂ ಕೊಹ್ಲಿಯ ಮೂರು ಮಾದರಿಗಳಲ್ಲಿ ನೀಡಿರುವ ಪ್ರದರ್ಶನ ಹಾಗೂ ದಾಖಲೆಯನ್ನು ವೀಕ್ಷಿಸಿಲ್ಲ,’ ಎಂಬುದಾಗಿ ಅವರು ಹೇಳಿದರು.
“ಕೆಲವೊಂದು ಬಾರಿ ಶತಕಗಳು ದಾಖಲಾಗುತ್ತವೆ, ಇನ್ನೊಂದಿಷ್ಟು ಸಮಯ ಅರ್ಧ ಶತಕಗಳು ಬರುತ್ತವೆ. ಅವೆಲ್ಲರೂ ಆಟದ ನಿಯಮ. ಆದರೆ, ವಿರಾಟ್ ಕೊಹ್ಲಿ ಎಂದಿಗೂ ದಿಗ್ಗಜ ಆಟಗಾರ. ಅವರು ದೀರ್ಘ ಕಾಲ ಫಾರ್ಮ್ ಕಳೆದುಕೊಳ್ಳುವುದಿಲ್ಲ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | IND vs Pak | ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಸೃಷ್ಟಿಸಿದ ಐದು ದಾಖಲೆಗಳಿವು