ಬೆಂಗಳೂರು: ವಿರಾಟ್ ಕೊಹ್ಲಿ(Virat Kohli) ಮೇಲೆ ಸದಾ ದ್ವೇಷ ಕಾರುವ, ಏನೇ ಸಾಧನೆ ಮಾಡಿದರೂ ಅದನ್ನು ಟೀಕಿಸುವ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರು ನ್ಯೂಜಿಲ್ಯಾಂಡ್(India vs New Zealand) ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ಆಧುನಿಕ ಕ್ರಿಕೆಟ್ನಲ್ಲಿ ಕೊಹ್ಲಿ ಶ್ರೇಷ್ಠ ಆಟಗಾರ ಎಂದಿದ್ದಾರೆ. ಗಂಭೀರ್ ಅವರ ಈ ಪ್ರಶಂಸೆಯ ಮಾತುಗಳನ್ನು ಕೇಳಿ ಕೊಹ್ಲಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಚೇಸಿಂಗ್ಗೆ ಕಷ್ಟಕರವಾದ ಧರ್ಮಶಾದಲ್ಲಿ ವಿರಾಟ್ ಕೊಹ್ಲಿ ಅವರು 104 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೇವಲ 5 ರನ್ ಅಂತರದಲ್ಲಿ ಶತಕ ಕಳೆದುಕೊಂಡರು. ಒಂದೊಮ್ಮೆ ಕೊಹ್ಲಿ ಅವರು ಶತಕ ಬಾರಿಸುತ್ತಿದ್ದರೆ, ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟುತ್ತಿದ್ದರು.
ಚೇಸಿಂಗ್ ಮಾಸ್ಟರ್
ಕೊಹ್ಲಿಯ ಬ್ಯಾಟಿಂಗ್ ಸಾಹಸ ಕಂಡ ಗಂಭೀರ್ ಅವರು ಪಂದ್ಯ ಬಳಿಕ ಸ್ಟಾರ್ಸ್ಟೋರ್ಟ್ಸ್ ಸಂದರ್ಶನಲ್ಲಿ ಮಾತನಾಡಿ, “ಆಧುನಿಕ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಫಿನಿಶರ್ ಆಗಿದ್ದಾರೆ. ಅವರನ್ನು ಬಿಟ್ಟು ಈ ರೀತಿಯ ಫಿನಿಶರ್ ಕ್ರಿಕೆಟ್ನಲ್ಲಿ ಸದ್ಯ ಮತ್ತೊಬ್ಬರಿಲ್ಲ. ವಿರಾಟ್ ಯಾವುವೇ ಕ್ರಮಂಕದಲ್ಲಿ ಬ್ಯಾಟ್ ಬೀಸಿದರೂ ಅವರಿಗೆ ಪಂದ್ಯವನ್ನು ಫಿನಿಶಿಂಗ್ ಮಾಡುವ ಸಾಮರ್ಥ್ಯವಿದೆ. ಎಲ್ಲ ವಿಕೆಟ್ ಆಧಾರದಲ್ಲೂ ಕೊಹ್ಲಿ ಚೇಸಿಂಗ್ ಮಾಸ್ಟರ್ ಆಗಿದ್ದಾರೆ” ಎಂದು ಗೌತಮ್ ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಿಂದ ಆರಂಭವಾದ ಮುನಿಸು
ವಿರಾಟ್ ಕೊಹ್ಲಿ ಅವರ ಆರಂಭಿಕ ಕ್ರಿಕೆಟ್ ಜರ್ನಿಯಲ್ಲಿ ಗಂಭೀರ್ ಅವರು ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿ ಕ್ರೀಡಾಸ್ಫೂರ್ತಿ ಮರೆದ್ದರು. ಅಲ್ಲದೆ ಯುವ ಕ್ರಿಕೆಟಿಗರಿಗೆ ಈ ರೀತಿಯ ಗೌರವ ನೀಡಿದರೆ ಅವರು ಮುಂದೆ ಶ್ರೇಷ್ಠ ಕ್ರಿಕೆಟ್ ಆಟಗಾರರಾಗಿ ಬೆಳೆಯುತ್ತಾರೆ ಎಂದಿದ್ದರು. ಆದರೆ ಆ ಬಳಿಕ ಉಭಯ ಆಟಗಾರರು ಹಾವು ಮುಂಗುಸಿಯಂತೆ ಕಚ್ಚಾಡುತ್ತಾ ದ್ವೇಷ ಸಾಧಿಸಿದರು. ಇದಕ್ಕೆ ಕಾರಣ 2013ರ ಐಪಿಎಲ್ನಲ್ಲಿ ನಡೆದ ಒಂದು ಘಟನೆ. ಗಂಭೀರ್ ಅವರು ಕೊಹ್ಲಿ ಔಟಾದಾಗ ಸಂಭ್ರಮಿಸಿದ್ದನ್ನು ಕಂಡ ಕೊಹ್ಲಿ ಸಿಟ್ಟಿನಲ್ಲಿ ಗಂಭೀರ್ಗೆ ಏನೋ ಹೇಳಿದ್ದರು. ಬಳಿಕ ವಾಗ್ವಾದ ನಡೆದು ಸಹ ಆಟಗಾರರು ಮತ್ತು ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರ ಜಗಳವನ್ನು ತಿಳಿಗೊಳಿದ್ದರು. ಇಲ್ಲಿಂದ ಆರಂಭಗೊಂಡ ಇಬರಿಬ್ಬರ ಮುನಿಸು ಈಗಾಗಲೂ ಮುಂದುವರಿದಿದೆ. ಇದೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಕೊಹ್ಲಿ ಮತ್ತು ಗಂಭೀರ್ ಕಿತ್ತಾಡ ನಡೆಸಿದ್ದರು. ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು ಉಭಯ ಆಟಗಾರರ ಜಗಳ. ಇದೀಗ ಗಂಭೀರ್ ಅವರು ಮುಕ್ತ ಕಂಠದಿಂದ ಕೊಹ್ಲಿಯನ್ನು ಹೊಗಳಿದ್ದಾರೆ.
ಇದನ್ನೂ ಓದಿ ICC World Cup 2023: ಸೆಮಿಫೈನಲ್ ಪ್ರವೇಶಕ್ಕೆ ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ಅಭಿಮಾನಿಗಳಿಗೆ ಅಚ್ಚರಿ
ಗೌತಮ್ ಗಂಭೀರ್ ಅವರು ಕೊಹ್ಲಿಯನ್ನು ಹೊಗಳುತ್ತಿದಂತೆ ಕೊಹ್ಲಿಯ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡು ಅರೇ ಸೂರ್ಯ ದಕ್ಷಿಣದಲ್ಲಿ ಮೂಡಿದಂತಿದೆ ಎಂದಿದ್ದಾರೆ. ಇನ್ನು ಕೆಲವರು ಕೊನೆಗೂ ಕೊಹ್ಲಿಯ ಸಾಧನೆ ಏನೆಂಬಹುದು ನಿಮಗೆ ತಿಳಿಯಿತಲ್ಲವೇ ಎಂದು ಹೇಳಿದ್ದಾರೆ.
ಇದನ್ನೂ ಓದಿ IND vs NZ: 2 ಕ್ಯಾಚ್ ಹಿಡಿದು ದಾಖಲೆ ಬರೆದ ಕಿಂಗ್ ಕೊಹ್ಲಿ; ದಿಗ್ಗಜ ಆಟಗಾರನ ದಾಖಲೆ ಉಡೀಸ್
ರೋಹಿತ್ ಪ್ರದರ್ಶನಕ್ಕೂ ಮೆಚ್ಚುಗೆ ವ್ಯಕ್ತಪಡಿಸಿರುವ ಗಂಭೀರ್, ಹಿಟ್ ಮ್ಯಾನ್ ರೋಹಿತ್ ಇದೇ ರೀತಿಯ ಪರದರ್ಶನ ತೋರುತ್ತಿರುದರಿಂದ ಭಾರತಕ್ಕೆ ಆರಂಭದಲ್ಲಿ ಉತ್ತಮ ರನ್ ಹರಿದುಬರುತ್ತಿದೆ. ಇದರಿಂದ ಆ ಬಳಿಕ ಬ್ಯಾಟ್ ಬೀಸುವ ಆಟಗಾರರು ಒತ್ತಡ ರಹಿತವಾಗಿ ಬ್ಯಾಟ್ ಬೀಸಿ ತಂಡವನ್ನು ಗೆಲುವಿನ ದಡ ಸೇರಿಸಲು ಸಹಕಾರಿಯಾಗುತ್ತಿದೆ ಎಂದರು. ರೋಹಿತ್ ಅವರು ಕಿವೀಸ್ ವಿರುದ್ಧ 4 ಸೊಗಸಾದ ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ 46 ರನ್ ಬಾರಿಸಿದರು.