ನವ ದೆಹಲಿ : ಫಿಫಾ ಫುಟ್ಬಾಲ್ ವಿಶ್ವ ಕಪ್ ಗೆಲ್ಲುವುದು ತಂಡವೊಂದರ ಗರಿಷ್ಠ ಸಂಭ್ರಮಕ್ಕೆ ಕಾರಣವಾಗುವ ಸಂಗತಿ. ಅಂತೆಯೇ ಕಳೆದ ಆವೃತ್ತಿಯ ಫಿಫಾ ವಿಶ್ವ ಕಪ್ ಗೆದ್ದಿರುವ ಅರ್ಜೆಂಟೀನಾ ತಂಡದ ಇನ್ನೂ ಸಂಭ್ರಮದಲ್ಲೇ ಇದೆ. ಅರದಲ್ಲೂ ನಾಯಕ ಲಿಯೋನೆಲ್ ಮೆಸ್ಸಿಯ (Lionel Messi) ಖುಷಿಗೆ ಮಿತಿಯೇ ಇಲ್ಲ. ಈ ಖುಷಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ವಿಶ್ವ ಕಪ್ ಟೂರ್ನಿಯಲ್ಲಿ ಆಡಿದ ತಂಡದ ಸಹ ಸದಸ್ಯರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ 1.7 ಕೋಟಿ ರೂಪಾಯಿ ಬೆಲೆಯ ಚಿನ್ನದ ಐಫೋನ್ ನೀಡಲು ಮುಂದಾಗಿದ್ದಾರೆ ಎಂಬುದಾಗಿ ದಿ ಸನ್ ಪತ್ರಿಕೆ ವರದಿ ಮಾಡಿದೆ.
24 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾದ ಈ ಫೋನ್ಗಳಲ್ಲಿ ಆಟಗಾರರ ಜೆರ್ಸಿ ಸಂಖ್ಯೆ ಹಾಗೂ ಹೆಸರು ಹಾಗೂ ಅರ್ಜೆಂಟೀನಾದ ಲೋಗೊ ಕೆತ್ತಲಾಗಿದೆ. ವಿಶ್ವ ಕಪ್ ಗೆದ್ದ ತಂಡಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಗುರಿ ಹೊಂದಿದ್ದ ಮೆಸ್ಸಿ ಡಿಸೈನರ್ ಹಾಗೂ ಉದ್ಯಮಿ ಬೆನ್ ಲಿಯೋನ್ಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಬಳಿಕ ಚಿನ್ನದ ಫೋನ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : Lionel Messi: ಫಿಫಾ ವರ್ಷದ ಆಟಗಾರ ಪ್ರಶಸ್ತಿ ಪಡೆದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ
ಚಿನ್ನದ ಪೋನ್ ವಿನ್ಯಾಸ ಮಾಡಿರುವ ಐಡಿಸೈನ್ ಸಂಸ್ಥೆಯೂ ಸನ್ ಪತ್ರಿಕೆಗೆ ಲಿಯೋನೆಲ್ ಮೆಸ್ಸಿಯ ಖರೀದಿಯ ಬಗ್ಗೆ ಮಾತನಾಡಿದೆ. ಮೆಸ್ಸಿನ ನಮ್ಮ ಗ್ರಾಹಕ. ವಿಶ್ವ ಕಪ್ ಗೆದ್ದ ಕೆಲವೇ ದಿನಗಳಲ್ಲಿ ನಮ್ಮನ್ನು ಭೇಟಿ ಮಾಡಿದ ಮೆಸ್ಸಿ ಆಟಗಾರರಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂದು ಕೇಳಿಕೊಂಡರು. ಎಲ್ಲರೂ ಕೊಡುವ ಹಾಗೆ ಚಿನ್ನದ ವಾಚ್ ಕೊಡುವುದು ಅವರಿಗೆ ಇಷ್ಟ ಇರಲಿಲ್ಲ. ಈ ವೇಳೆ ಚಿನ್ನದ ಐಫೋನ್ ಚರ್ಚೆಗೆ ಬಂತು ಎಂದು ಅವರು ಹೇಳಿದ್ದಾರೆ.
ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು 4-2 ಗೋಲ್ಗಳಿಂದ ಸೋಲಿಸಿ ವಿಶ್ವ ಕಪ್ ಗೆದ್ದಿತ್ತು.
ಯಾರಿಗೆಲ್ಲ ಸಿಕ್ಕಿತ್ತು ಚಿನ್ನದ ಫೋನ್
ಎಮಿ ಮಾರ್ಟಿನೆಜ್, ಫ್ರಾಂಕೊ ಅರ್ಮಾನಿ, ಗೆರೊನಿಮೊ ರುಲ್ಲಿ, ಮಾರ್ಕೋಸ್ ಅಕುನಾ, ಜುವಾನ್ ಫಾಯ್ತ್, ಲಿಸಾಂಡ್ರೊ ಮಾರ್ಟಿನೆಜ್, ನಿಕೋಲಸ್ ಟ್ಯಾಗ್ಲಿಯಾಫಿಕೊ, ಕ್ರಿಸ್ಟಿಯನ್ ರೊಮೆರೊ, ನಿಕೋಲಸ್ ಒಟಮೆಂಡಿ, ನಹುಯೆಲ್ ಮೊಲಿನಾ, ಗೊನ್ಜಾಲೊ ಮೊಂಟಿಯೆಲ್, ಜರ್ಮನ್ ಪೆಜ್ಜೆಲ್ಲಾ, ಏಂಜೆಲ್ ಡಿ ಮಾರಿಯಾ, ಲಿಯಾಂಡ್ರೊ ಪರೆಡೆಸ್ , ಎಂಝೋ ಫೆರ್ನಾಂಡಿಸ್, ಎಕ್ಸಿಕ್ವಿಯೆಲ್ ಪಲಾಸಿಯೋಸ್, ಗಿಡೋ ರೊಡ್ರಿಗಸ್, ಲಿಯೋನೆಲ್ ಮೆಸ್ಸಿ, ಲೌಟಾರೊ ಮಾರ್ಟಿನೆಜ್, ಪಾಲೊ ಡೈಬಾಲಾ, ಏಂಜೆಲ್ ಕೊರಿಯಾ, ಜೂಲಿಯನ್ ಅಲ್ವಾರೆಜ್, ಥಿಯಾಗೊ ಅಲ್ಮಾಡಾ, ಅಲೆಜಾಂಡ್ರೊ ಗೊಮೆಜ್.