Site icon Vistara News

ಲಂಕಾ ಕ್ರಿಕೆಟ್ ಮಂಡಳಿ ವಜಾ ಆದೇಶಕ್ಕೆ ಕೋರ್ಟ್​ ತಡೆ; ಸಚಿವ ರಣಸಿಂಘೆಗೆ ಹಿನ್ನಡೆ

Sri Lanka cricket board

ಕೊಲಂಬೊ: ಹಾಲಿ ಆವೃತ್ತಿಯ ವಿಶ್ವಕಪ್​​ ಟೂರ್ನಿಯಲ್ಲಿ(icc world cup 2023) ಶ್ರೀಲಂಕಾ ತಂಡ ಭಾರತ ವಿರುದ್ಧ ಅತ್ಯಂತ ಹೀನಾಯ ಸೋಲು ಕಂಡ ಕಾರಣಕ್ಕೆ, ಶ್ರೀಲಂಕಾದ ಕ್ರೀಡಾ ಸಚಿವ ರೋಷನ್‌ ರಣಸಿಂಘೆ(Roshan Ranasinghe) ಅವರು ರಾಷ್ಟ್ರೀಯ ಕ್ರಿಕೆಟ್‌(Sri Lanka Cricket Board) ಮಂಡಳಿಯನ್ನು ವಜಾಗೊಳಿಸಿ ಆದೇಶಿಸಿದ್ದರು. ಇದೀಗ ಈ ಆದೇಶಕ್ಕೆ ಕೋರ್ಟ್​ ತಡೆ ನೀಡಿದೆ.

ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ನ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ ಕ್ರೀಡಾ ಸಚಿವರ ನಿರ್ಧಾರವನ್ನು ಮಂಗಳವಾರ ರದ್ದುಗೊಳಿಸಿತು. ಹಾಗೂ ಪೂರ್ಣ ವಿಚಾರಣೆ ನಡೆಯುವ ಮುಂದಿನ 2 ವಾರಗಳ ಕಾಲ ಉಚ್ಛಾಟಿತ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಆದೇಶಿಸಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿ ಮಧ್ಯಂತರ ಸಮಿತಿಯನ್ನು ನೇಮಿಸಿರುವ ಸಚಿವ ರೋಷನ್ ರಣಸಿಂಘೆ ಅವರ ಈ ಕ್ರಮವನ್ನು ಪ್ರಶ್ನಿಸಿ ಮಂಡಳಿಯ ಅಧ್ಯಕ್ಷರಾಗಿದ್ದ ಶಮ್ಮಿ ಸಿಲ್ವಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿದ್ದರು. ಇದನ್ನು ವಿಚಾರಣೆ ನಡೆಸಿ ಕೋರ್ಟ್​ “ಮಂಡಳಿಯ ಮರುಸ್ಥಾಪನೆಯು ಎರಡು ವಾರಗಳವರೆಗೆ ಇರುತ್ತದೆ. ನ್ಯಾಯಾಲಯವು ಮತ್ತೆ ಪ್ರಕರಣವನ್ನು ಆಲಿಸುತ್ತದೆ” ಎಂದು ಹೇಳಿದೆ.

ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರಣತುಂಗ

ಸೋಲಿಗೆ ಶಿಕ್ಷೆಯಾಗಿ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯನ್ನು ವಜಾಗೊಳಿಸಿದ್ದ ಸಚಿವ ರೋಷನ್‌ ರಣಸಿಂಘೆ, ಮಂಡಳಿಯ ಮಧ್ಯಂತರ ಅಧ್ಯಕ್ಷರನ್ನಾಗಿ 1996ರ ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಅರ್ಜುನ ರಣತುಂಗ(Arjuna Ranatunga) ಅವರನ್ನು ನೇಮಕ ಮಾಡಿದ್ದರು. ನೆವೆಂಬರ್ 2 ರಂದು ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ನೀಡಿದ 358 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡು, 302ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.

ಲಂಕಾದ ಸೋಲಿನಿಂದ ಕೆರಳಿದ್ದ ರಣಸಿಂಘೆ ಅವರು ಕ್ರಿಕೆಟ್​ ಮಂಡಳಿಯ ಪದಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ನಿಮಗೆ ಅಧಿಕಾರದಲ್ಲಿ ಉಳಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ನುಡಿದಿದ್ದರು. ಅಲ್ಲದೆ ತಕ್ಷಣ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ BAN vs SL: ಹಸ್ತಲಾಘವ ಮಾಡದೆ ಮೈದಾನ ತೊರೆದ ಲಂಕಾ ಆಟಗಾರರು; ಕಾರಣ ಏನು?

ಏಷ್ಯಾಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿಯೂ ಲಂಕಾ ತಂಡ ಭಾರತ ಎದುರು ಕೇವಲ 50 ರನ್​ಗೆ ಆಲೌಟ್​ ಆಗಿ ಹೀನಾಯ ಸೋಲು ಕಂಡಿತ್ತು. ಈ ವೇಳೆಯೂ ರಣಸಿಂಘೆ ಅವರು ಕ್ರಿಕೆಟ್​ ಮಂಡಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಎಚ್ಚರಿಕೆಯನ್ನೂ ನೀಡಿದ್ದರು. ವಿಶ್ವಕಪ್​ನಲ್ಲಿಯೂ ಇದೇ ಪ್ರದರ್ಶನ ಮುಂದುವರಿದ ಕಾರಣ ಮಂಡಳಿಯನ್ನೇ ವಜಾಗೊಳಿಸಲಾಗಿದೆ.

ಟೂರ್ನಿಯಿಂದ ಹೊರಬಿದ್ದ ಲಂಕಾ

ಶ್ರೀಲಂಕಾ ತಂಡ ಸೋಮವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ವಿಶ್ವಕಪ್​ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದೆ. ಅರುಣ್ ​ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಈ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕಿಬ್ ಅಲ್​ ಹಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 49.3 ಓವರ್​ಗಳಲ್ಲಿ 279 ರನ್​ ಬಾರಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ಬಾಂಗ್ಲಾ ಹುಲಿಗಳು ಇನ್ನೂ 53 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್​ ಕಳೆದುಕೊಂಡು 282 ರನ್ ಬಾರಿಸಿ ಜಯ ಸಾಧಿಸಿತು.

Exit mobile version