ಲಾರ್ಡ್ಸ್: ಸ್ಟೀವ್ ಸ್ಮಿತ್ (110 ರನ್) ಅವರ ವೃತ್ತಿ ಜೀವನದ 32ನೇ ಟೆಸ್ಟ್ ಶತಕದ ನೆರವು ಪಡೆದ ಆಸ್ಟ್ರೇಲಿಯಾ ತಂಡದ ಆ್ಯಶಸ್ ಸರಣಿಯ (Ashes 2023) ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 416 ರನ್ ಬಾರಿಸಿ ಆಲ್ಔಟ್ ಆಗಿದೆ. ಪ್ರತಿಯಾಗಿ ಬ್ಯಾಟ್ ಮಾಡುತ್ತಿರುವ ಇಂಗ್ಲೆಂಡ್ ತಂಡ ಎರಡನೇ ದಿನದ ಆಟ ಮುಕ್ತಾಯಗೊಂಡಾಗ 4 ವಿಕೆಟ್ ಕಳೆದುಕೊಂಡು 278 ರನ್ ಬಾರಿಸಿದೆ. ಆದಾಗ್ಯೂ ಇಂಗ್ಲೆಂಡ್ ತಂಡ 138 ರನ್ಗಳ ಹಿನ್ನಡೆಯಲ್ಲಿದೆ.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನದಾಟದ ಭೋಜನ ವಿರಾಮಕ್ಕೆ ಮೊದಲು ಆಸ್ಟ್ರೇಲಿಯಾ ತಂಡ ಆಲ್ಔಟ್ ಆಯಿತು. ಬಳಿಕ ಎರಡು ಸೆಷನ್ ಅಡಿರುವ ಇಂಗ್ಲೆಂಡ್ ತಂಡ ಉತ್ತಮ ಮೊತ್ತ ಪೇರಿಸಿದೆ. ಆರಂಭಿಕ ಬ್ಯಾಟರ್ ಬೆನ್ ಡಕೆಟ್ 98 ರನ್ ಬಾರಿಸುವ ಮೂಲಕ ದೊಡ್ಡ ಮೊತ್ತ ಗುರಿಯನ್ನು ಬೆನ್ನಟ್ಟುವಲ್ಲಿ ಸಮರ್ಥ ಹೋರಾಟ ನಡೆಸಿದರು. ಆದರೆ ಕೇವಲ 2 ರನ್ಗಳ ಕೊರತೆಯೊಂದಿಗೆ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಜಾಕ್ ಕ್ರಾವ್ಲಿ 48 ಬಾರಿಸಿ ಔಟಾಗುವ ಮೂಲಕ ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.
ಈ ಜೋಡಿ ಮೊದಲ ವಿಕೆಟ್ಗೆ 91 ರನ್ ಬಾರಿಸುವ ಮೂಲಕ ಆತಿಥೇಯ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿತು. ಆದರೆ, ಕ್ರಾವ್ಲಿ ವಿಕೆಟ್ ಉರುಳಿಸುವ ಮೂಲಕ ಆಸ್ಟ್ತೇಲಿಯಾ ತಂಡ ಮೊದಲ ಯಶಸ್ಸು ಗಳಿಸಿತು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಒಲಿ ಪೋಪ್ 42 ರನ್ ಕೊಡುಗೆ ಕೊಟ್ಟರು. ಇವರ ಜತೆಯಾಟನ್ನು ಆಸೀಸ್ ಬೌಲರ್ ಕ್ಯಾಮೆರಾನ್ ಗ್ರೀನ್ ಮುರಿದರು. ಒಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು.
Test in the balance after England deliver with the bat 🌟#WTC25 | #ENGvAUS 📝: https://t.co/liWqlPCKqn pic.twitter.com/FA7Voy1Y5k
— ICC (@ICC) June 29, 2023
ಇದಾದ ಬಳಿಕ ಶತಕದ ಹೊಸ್ತಿಲಿನಲ್ಲಿದ್ದ ಬೆನ್ ಡಕೆಟ್ ಅವರ ವಿಕೆಟ್ ವೇಗಿ ಹೇಜಲ್ವುಡ್ ಪಾಲಾಯಿತು. ಅದೇ ನಂತರ ಬಂದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ 10 ರನ್ಗೆ ಸೀಮಿತಗೊಂಡರು. ಹೀಗಾಗಿ 222 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ಗೆ ಆತಂಕ ಎದುರಾಯಿತು. ಬಳಿಕ ಆಡಲು ಬಂದ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 45 ರನ್ ಬಾರಿಸಿ ವಿಕೆಟ್ ಉರುಳುದಂತೆ ನೋಡಿಕೊಂಡರು. ನಾಯಕ ಬೆನ್ ಸ್ಟೋಕ್ಸ್ 18 ರನ್ ಬಾರಿಸಿ ಮೂರನೇ ದಿನಕ್ಕೆ ಆಟ ಮುಂದುವರಿಸಿದ್ದಾರೆ. ಈ ಜೋಡಿಯೂ 56 ರನ್ಗಳನ್ನು ಬಾರಿಸಿದೆ.
ಇದನ್ನೂ ಓದಿ : Ashes 2023 : ಬ್ರಾಡ್ಮನ್, ಸಚಿನ್ ದಾಖಲೆ ಮುರಿದ ಸ್ಟೀವ್ ಸ್ಮಿತ್! ಏನದು ಹೊಸ ಮೈಲುಗಲ್ಲು?
ಆಸ್ಟ್ರೇಲಿಯಾ ತಂಡಕ್ಕೆ ಸ್ಮಿತ್ ನೆರವು
ಮೊದಲ ದಿನದ ಆಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 339 ರನ್ ಬಾರಿಸಿದ್ದ ಆಸ್ಟ್ರೇಲಿಯಾ ತಂಡ ಎರಡನೇ ಇದನ ಅದಕ್ಕೆ ಕೇವಲ 77 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ದಿನದ ಮೊದಲ ಸೆಷನ್ನಲ್ಲಿ ಆಂಗ್ಲರ ಪಡೆಯ ಬೌಲರ್ಗಳು ಪಾರಮ್ಯ ಮೆರೆದರು. ಆದಾಗ್ಯೂ ಸ್ಟೀವ್ ಸ್ಮಿತ್ ತಮ್ಮ 32ನೇ ಟೆಸ್ಟ್ ಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಅವರು 184 ಎಸೆತಗಳಲ್ಲಿ 110 ರನ್ ಬಾರಿಸಿ ಔಟಾದರು. ಬಳಿಕ ಆಸೀಸ್ ಬಳಗದ ಉಳಿದ ವಿಕೆಟ್ಗಳು ಉರುಳಿದವು. ನಾಯಕ ಪ್ಯಾಟ್ ಕಮಿನ್ಸ್ ಅಜೇಯ 22 ರನ್ ಬಾರಿಸಿದರು.