ನವ ದೆಹಲಿ: ಬಾರ್ಡರ್- ಗವಾಸ್ಕರ್ ಟ್ರೋಫಿ (INDvsAUS Test) ಎರಡನೇ ಪಂದ್ಯಕ್ಕಾಗಿ ಇತ್ತಂಡಗಳೂ ಕೊನೇ ಹಂತದ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿವೆ. ಭಾರತ ತಂಡ ಆಡುವ 11ರ ಬಳಗದಲ್ಲಿ ಯಾರೆಲ್ಲ ಇರಬೇಕು ಎಂದು ಲೆಕ್ಕಾಚಾರ ಹಾಕಿಕೊಳ್ಳುತ್ತಿರುವ ವೇಳೆ ಪ್ರವಾಸಿ ಆಸ್ಟ್ರೇಲಿಯಾ ತಂಡ ಮುಂದಿನ ಪಂದ್ಯಕ್ಕೆ ಎಷ್ಟು ಸ್ಪಿನ್ನರ್ಗಳನ್ನು ಆಡಿಸಿದರೆ ಉತ್ತಮ ಎಂಬ ಗೊಂದಲದಲ್ಲಿದೆ. ಇದೇ ವೇಳೆ ಆಸೀಸ್ ಪಡೆಗೆ ಗುಡ್ನ್ಯೂಸ್ ಒಂದು ಬಂದಿದ್ದು, ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಫುಲ್ ಫಿಟ್ ಎನಿಸಿಕೊಂಡು ಭಾರತಕ್ಕೆ ಬಂದು ಇಳಿದಿದ್ದಾರೆ. ಒಂದು ವೇಳೆ ಅವರು ಎರಡನೇ ಪಂದ್ಯಕ್ಕೆ ಲಭ್ಯರಾದೆ ಪ್ರವಾಸಿ ತಂಡಕ್ಕೆ ದೊಡ್ಡ ಲಾಭವಾಗಲಿದೆ.
ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ತಮ್ಮ ಯಾರ್ಕರ್ ಹಾಗೂ ಸ್ವಿಂಗ್ ಎಸೆತದ ಮೂಲಕ ಎದುರಾಳಿ ತಂಡದ ಬ್ಯಾಟರ್ಗಳು ಬೆಚ್ಚಿ ಬೀಳಿಸುತ್ತಾರೆ. ಆದರೆ, ಬೆರಳು ನೋವಿನ ಕಾರಣಕ್ಕೆ ಅವರು ಮೊದಲ ಪಂದ್ಯಕ್ಕೆ ಫಿಟ್ ಆಗಿರಲಿಲ್ಲ. ಇದೀಗ ಅವರು ಸಂಫೂರ್ಣ ಫಿಟ್ ಎನಿಸಿಕೊಂಡಿದ್ದು, ಭಾರತಕ್ಕೆ ಬಂದಿಳಿದು ತಂಡ ಸೇರಿಕೊಂಡಿದ್ದಾರೆ. ಹೊಸ ಚೆಂಡಿನಲ್ಲಿ ಕರಾಮತ್ತು ತೋರಬಲ್ಲ ಅವರನೇದಾದರೂ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಂಡರೆ ಪ್ರವಾಸಿ ತಂಡಕ್ಕೆ ಲಾಭವಾಗಲಿದೆ.
ನಾನು ಆಡುವುದಕ್ಕೆ ಫಿಟ್ ಇದ್ದೇನೆ. ಬೆರಳು ನೋವಿನ ಸಮಸ್ಯೆ ಇದ್ದ ಹೊರತಾಗಿಯೂ ಫಿಂಗರ್ ಕ್ಯಾಪ್ ಧರಿಸಿಕೊಂಡು ಫೀಲ್ಡಿಂಗ್ ಮಾಡಬಲ್ಲೆ. ಆದರೆ, ಬ್ಯಾಟಿಂಗ್ ಮಾಡುವುದಕ್ಕೆ ಸ್ವಲ್ಪ ಸಮಸ್ಯೆ ಇದೆ. ಅದನ್ನು ಸರಿಪಡಿಸಿಕೊಳ್ಳಬಲ್ಲೆ ಎಂಬುದಾಗಿ ಸ್ಟಾರ್ಕ್ ಹೇಳಿದ್ದಾರೆ.
ಇದನ್ನೂ ಓದಿ : Border Gavaskar Trophy 2023 | ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ; ಸ್ಟಾರ್ಕ್ ಇಲ್ಲ, ಗ್ರೀನ್ ಅಲಭ್ಯ
ನನ್ನ ಲಭ್ಯತೆ ತಂಡದ ಮ್ಯಾನೇಜ್ಮೆಂಟ್ ನಿರ್ಧಾರದ ಮೇಲೆ ನಿಂತಿದೆ. ನಾಯಕ ಪ್ಯಾಟ್ ಕಮಿನ್ಸ್, ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ವೈದ್ಯಕೀಯ ತಂಡವೂ ಕೊನೇ ಹಂತದ ತೀರ್ಮಾನ ಪ್ರಕಟಿಸಲಿದ್ದಾರೆ ಎಂಬುದಾಗಿ ಸ್ಟಾರ್ಕ್ ಹೇಳಿದ್ದಾರೆ.