ಇಂದೋರ್: ಆತಿಥೇಯ ಭಾರತ ತಂಡ ನ್ಯೂಜಿಲ್ಯಾಂಡ್(IND VS NZ) ವಿರುದ್ಧ ಅಂತಿಮ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳು ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ಮಂಗಳವಾರ ಸೆಣಸಾಟ ನಡೆಸಲಿದೆ. ಒಂದೆಡೆ ಕಿವೀಸ್ ವೈಟ್ ವಾಶ್ ಅವಮಾನದಿಂದ ಪಾರಾಗಲು ಹೋರಾಡಿದರೆ ಅತ್ತ ರೋಹಿತ್ ಪಡೆ ಈ ಪಂದ್ಯದಲ್ಲಿಯೂ ಗೆದ್ದು ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆಯುವ ಯೋಜನೆಯಲ್ಲಿದೆ. ಹೀಗಾಗಿ ಈ ಪಂದ್ಯವನ್ನು ಜಿದ್ದಾಜಿದ್ದಿನಿಂದ ನಿರೀಕ್ಷಿಸಬಹುದು.
ಭಾರತ ತಂಡದಲ್ಲಿ ಹಲವು ಬದಲಾವಣೆ?
ಈಗಾಗಗಲೇ ಸರಣಿ ಗೆದ್ದಿರುವ ಭಾರತ ತಂಡ ಈ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಸರಣಿಯಲ್ಲಿ ಆಡಲು ಅವಕಾಶ ಸಿಗದ ಆಟಗಾರರಿಗೆ ಅವಕಾಶ ಸಿಗಬಹುದು. ಇನ್ನೊಂದೆಡೆ ಟಿ20 ಸರಣಿಯಲ್ಲಿರುವ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿದಂತೆ ಆಸೀಸ್ ಟೆಸ್ಟ್ ಸರಣಿಗಾಗಿ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಪದಾರ್ಪಣೆ ನಿರೀಕ್ಷೆಯಲ್ಲಿ ರಜತ್ ಪಾಟೀದಾರ್
ಬೆನ್ನು ನೋವಿನ ಸಮಸ್ಯೆಯಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ ಬದಲಿಗೆ ತಂಡ ಸೇರಿದ ರಜತ್ ಪಾಟೀದಾರ್ ಈ ಪಂದ್ಯದ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಮುಂಬರುವ ಏಕದಿನ ವಿಶ್ವ ಕಪ್ನಲ್ಲಿ ತಂಡದ ಬೆಂಚ್ ಸಾಮರ್ಥವನ್ನು ಪರೀಕ್ಷಿಸುವ ಸಲುವಾಗಿ ಈ ಪಂದ್ಯದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಬಿಸಿಸಿಐ ಪ್ರಯೋಗವೊಂದನ್ನು ನಡೆಸುವ ಸಾಧ್ಯತೆ ಇದೆ.
ವೈಟ್ವಾಶ್ನಿಂದ ಪಾರಾದೀತೇ ನ್ಯೂಜಿಲ್ಯಾಂಡ್
ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸೋಲು ಕಂಡರೂ ದ್ವಿತೀಯ ಪಂದ್ಯದಲ್ಲಿ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಇಲ್ಲಿ ತೀರ ಕಳಪೆ ಪ್ರದರ್ಶನ ತೋರುವ ಮೂಲಕ ಹೀನಾಯ ಸೋಲು ಕಂಡಿತು. ಇದೀಗ ಅಂತಿಮ ಪಂದ್ಯದಲ್ಲಾದರೂ ಕಿವೀಸ್ ಗೆದ್ದು ವೈಟ್ವಾಸ್ ಮುಖಭಂಗದಿಂದ ಪಾರಾದೀತೇ ಎಂದು ಕಾದು ನೋಡಬೇಕಿದೆ. ಅಗ್ರ ಕ್ರಮಾಂಕದ ಆಟಗಾರರಾದ ಫಿನ್ ಅಲೆನ್, ಡೆವೋನ್ ಕಾನ್ವೆ ಮತ್ತು ಹಂಗಾಮಿ ನಾಯಕ ಟಾಮ್ ಲ್ಯಾಥಮ್ ಈ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಈ ಪಂದ್ಯದಲ್ಲಾದರೂ ಮೂರು ಆಟಗಾರರು ಸಿಡಿದು ನಿಂತು ತಂಡವನ್ನು ಸೋಲಿನಿಂದ ಪಾರು ಮಾಡಬೇಕಿದೆ.
ಇದನ್ನೂ ಓದಿ| IND VS NZ: ಭಾರತ-ನ್ಯೂಜಿಲ್ಯಾಂಡ್ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ