Site icon Vistara News

Indian Cricket Team | ರಾಹುಲ್​ಗೆ ಒಡಿಐ ವಿಶ್ವ ಕಪ್​ನಲ್ಲಿ ಅವಕಾಶ ಸಿಗದು ಎಂದು ಭವಿಷ್ಯ ನುಡಿದ ಮಾಜಿ ಕೋಚ್​

KL Rahul injury

ಬೆಂಗಳೂರು: ಕನ್ನಡಿಗ ಹಾಗೂ ಭಾರತ ತಂಡದ (Indian Cricket Team) ಆರಂಭಿಕ ಬ್ಯಾಟರ್​ ಕೆ. ಎಲ್​ ರಾಹುಲ್​ ಅವರು ಮುಂಬರುವ ವಿಶ್ವ ಕಪ್​ನಲ್ಲಿ ಆಡುವ ತಂಡದಲ್ಲಿ ಅವಕಾಶ ಪಡೆಯುವರೇ ಎಂಬುದಾಗಿ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಕಳೆದ ಒಂದು ವರ್ಷದಲ್ಲಿ ಅವರು ಕಳಪೆ ಪ್ರದರ್ಶನ ನೀಡಿರುವುದೇ ಅದಕ್ಕೆ ಕಾರಣ. ಪ್ರಮುಖವಾಗಿ ಟಿ20 ವಿಶ್ವ ಕಪ್​ನಲ್ಲಿ ಅವರು ಆಡಿದ ರೀತಿಗೆ ಕ್ರಿಕೆಟ್​ ಪಂಡಿತರು ಬೇಸರ ವ್ಯಕ್ತಪಡಿಸಿದ್ದರು. ಆಕ್ರಮಣಕಾರಿಯಾಗಿ ಆಡಬೇಕಾದ ಮಾದರಿಯಲ್ಲಿ ಅವರು ಹೆದರಿಕೊಂಡೇ ಬ್ಯಾಟ್​ ಮಾಡಿ ಎದುರಾಳಿ ತಂಡಕ್ಕೆ ವಿಕೆಟ್ ಒಪ್ಪಿಸಿದ್ದರು.

ಭಾರತ ತಂಡದಲ್ಲಿ ಸ್ಥಾನ ಪಡೆಯಲು ತುರುಸಿನ ಸ್ಪರ್ಧೆಯಿದ್ದು, ಯುವ ಆಟಗಾರರು ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. ಹೀಗಾಗಿ ಒಂದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದೇ ಹೋದರೆ ಅವಕಾಶ ಕಳೆದುಕೊಳ್ಳುವುದು ಖಾತರಿ. ಅಂತೆಯ ಬಾಂಗ್ಲಾದೇಶ ವಿರುದ್ಧದ ಏಕ ದಿನ ಹಾಗೂ ಟೆಸ್ಟ್​ ಸರಣಿಯಲ್ಲೂ ರಾಹುಲ್ ಅವರ ಪ್ರದರ್ಶನದ ಗ್ರಾಫ್​ ಏರಲೇ ಇಲ್ಲ. ಹೀಗಾಗಿ ಮುಂದಿನ ವಿಶ್ವ ಕಪ್​ನಲ್ಲಿ ಅವಕಾಶ ಪಡೆಯಲಾರರು ಎನ್ನಲಾಗುತ್ತಿದೆ.

ಟೀಮ್​ ಇಂಡಿಯಾದ ಮಾಜಿ ಕೋಚ್ ಸಂಜಯ್​ ಬಂಗಾರ ಅವರೂ ಇದೇ ಮಾತನ್ನು ಹೇಳುತ್ತಿದ್ದಾರೆ. ಕ್ರಿಕ್​ ಇನ್ಫೋ ಜತೆ ಮಾತನಾಡಿದ ಅವರು, ಯುವ ವಿಕೆಟ್​ಕೀಪರ್​ ಇಶಾನ್​ ಕಿಶನ್ ಅವರು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ದಾಖಲೆಯ ದ್ವಿಶತಕ ಬಾರಿಸಿ ವಿಶ್ವಾಸ ಮೂಡಿಸಿದ್ದಾರೆ. ಹೀಗಾಗಿ ರಾಹುಲ್ ಅವರ ಸ್ಥಾನ ಅತಂತ್ರವಾಗಲಿದೆ. ಇಶಾನ್​ ಇನಿಂಗ್ಸ್​ ಆರಂಭಿಸುವ ಕಾರಣ ರಾಹುಲ್​ ಸ್ಥಾನ ತುಂಬಲಿದ್ದಾರೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ತಂಡಕ್ಕೆ ಮರಳಿದರೆ ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲಿದ್ದಾರೆ. ಇದರಿಂದಾಗಿ ರಾಹುಲ್ ಅವರು ತಂಡದ ಭಾಗವಾಗುವುದು ಅನುಮಾನ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಹಾರ್ದಿಕ್​ ಪಾಂಡ್ಯ ಅವರು ಟೀಮ್ ಇಂಡಿಯಾದ ನಾಯಕತ್ವಕ್ಕೆ ಉತ್ತಮ ಆಯ್ಕೆ ಎಂದು ಹೇಳಿದರು. ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಅವರು ತಂಡವನ್ನು ಮುನ್ನಡೆಸಿದ ರೀತಿ ಉತ್ತಮವಾಗಿತ್ತು. ಹೀಗಾಗಿ ರೋಹಿತ್​ ಅವರಿಗೆ ಉತ್ತರಾಧಿಕಾರಿಯನ್ನು ಹುಡುಕುವ ಪ್ರಮೇಯ ಬಂದಾಗ ಪಾಂಡ್ಯ ಸೂಕ್ತ ಆಯ್ಕೆ ಎನಿಸಿಕೊಳ್ಳಲಿದ್ದಾರೆ ಎಂಬುದಾಗಿ ಬಂಗಾರ ಹೇಳಿದ್ದಾರೆ.

ಇದನ್ನೂ ಓದಿ | Hardik Pandya | ಭಾರತ ಟಿ20 ಕ್ರಿಕೆಟ್​ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವ ಸಾಧ್ಯತೆ!​

Exit mobile version