ಇಂದೋರ್: ಬಾರ್ಡರ್- ಗವಾಸ್ಕರ್ ಟ್ರೋಫಿಯ (INDvsAUS) ಮೂರನೇ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲಿಗೆ ಒಳಗಾಗಿದೆ. ತಂಡದ ಪ್ರಮುಖ ಬ್ಯಾಟರ್ಗಳು ವೈಫಲ್ಯ ಕಂಡ ಕಾರಣ ಎರಡೂವರೆ ದಿನದಲ್ಲಿ ಪಂದ್ಯ ಮುಕ್ತಾಯಗೊಂಡಿತು ಹಾಗೂ ಭಾರತ ತಂಡ 9 ವಿಕೆಟ್ಗಳ ಸೋಲಿನ ಮುಖಭಂಗ ಎದುರಿಸಿತು. ಈ ಸೋಲಿನ ಬಗ್ಗೆ ನಾನಾ ಬಗೆಯ ವಿಶ್ಲೇಷಣೆಗಳು ನಡೆಯುತ್ತಿವೆ. ಬಹುತೇಕ ಮಂದಿ ಪಿಚ್ ಮಿತಿ ಮೀರಿ ಟರ್ನ್ ತೆಗೆದುಕೊಳ್ಳುತ್ತಿದ್ದ ಕಾರಣ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತಿ ಪಿಚ್ ಟರ್ನ್ ವಾದವನ್ನು ಒಪ್ಪುತ್ತಿಲ್ಲ. ಬದಲಾಗಿ ಭಾರತ ತಂಡದ ಬ್ಯಾಟರ್ಗಳ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
ಭಾರತ ತಂಡ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಕಾರಣ ಅದಕ್ಕೆ ಸಮಾಧಾನಪಟ್ಟುಕೊಂಡಿದೆ. ಇದೇ ವೇಳೆ ಮಿತಿ ಮೀರಿದ ಆತ್ಮವಿಶ್ವಾಸವನ್ನೂ ಪ್ರಕಟಿಸಿದೆ. ಏನು ಮಾಡಿದರೆ ನಡೆಯುತ್ತದೆ ಎಂಬ ಮನೋಭಾವದಿಂದ ರಕ್ಷಣಾತ್ಮಕ ಆಟಕ್ಕೆ ಗಮನ ಕೊಡಲಿಲ್ಲ ಎಂಬುದಾಗಿ ಪಂದ್ಯ ಮುಕ್ತಾಯದ ಬಳಿಕ ಶಾಸ್ತ್ರಿ ಹೇಳಿದ್ದಾರೆ.
ಮೊದಲ ಇನಿಂಗ್ಸ್ನ ಬ್ಯಾಟಿಂಗ್ ವೈಖರಿಯನ್ನೇ ಪರಿಗಣಿಸಿ ನೋಡುವುದಾದರೆ, ಕೆಟ್ಟ ಹೊಡೆತಗಳನ್ನು ಹೊಡೆಯಲು ಮುಂದಾಗಿ ಬಹುತೇಕ ಬ್ಯಾಟರ್ಗಳು ಔಟಾಗಿದ್ದಾರೆ. ಇದು ಅತಿಯಾದ ಆತ್ಮವಿಶ್ವಾಸಕ್ಕೆ ಸಾಕ್ಷಿ. ಪರಿಸ್ಥಿತಿ ಪೂರಕವಾಗಿದೆ ಎಂಬ ವಿಶ್ವಾಸದಿಂದ ಅನಗತ್ಯ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದಾರೆ ಎಂಬದಾಗಿ ಶಾಸ್ತ್ರಿ ನುಡಿದಿದ್ದಾರೆ.
ಇದನ್ನೂ ಓದಿ : INDvsAUS : ಕೆ ಎಲ್ ರಾಹುಲ್ ವಿರುದ್ಧ ಮಗದೊಮ್ಮೆ ಟೀಕೆಗಳ ಪ್ರಹಾರ ನಡೆಸಿದ ವೆಂಕಟೇಶ್ ಪ್ರಸಾದ್
ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ಕೂಡ ಆಟಗಾರರ ವೈಖರಿಯನ್ನು ಪ್ರಶ್ನಿಸಿದ್ದಾರೆ. ಪ್ರತಿಯೊಬ್ಬರೂ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಆಡಲು ಆರಂಭಿಸಿದ್ದಾರೆ. ಇದರಿಂದ ತಂಡದ ಪ್ರದರ್ಶನಕ್ಕೆ ಅಡಚಣೆ ಉಂಟಾಗುತ್ತಿದೆ. ಮೊದಲೆರಡು ಪಂದ್ಯಗಳಲ್ಲಿ ಆಡದ ಕೆ. ಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಹೀಗಾಗಿ ತಮ್ಮ ಸ್ಥಾನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಡುವ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.