ಮುಂಬಯಿ: ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು (Team India) ಮುನ್ನಡೆಸುತ್ತಿರುವ ಆರಂಭಿಕ ಬ್ಯಾಟರ್ ಶಿಖರ್ ಧವನ್, ಮೊದಲ ಪಂದ್ಯದಲ್ಲಿ ೭೨ ರನ್‌ಗಳನ್ನು ಬಾರಿಸಿದ್ದಾರೆ. ಅದಕ್ಕಾಗಿ ಅವರು ೭೭ ಎಸೆತಗಳನ್ನು ಬಳಸಿಕೊಂಡಿದ್ದಾರೆ. ಏಕ ದಿನ ಮಾದರಿಯಲ್ಲಿ ಅವರ ೩೯ನೇ ಅರ್ಧ ಶತಕ ಹಾಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ೧೨ ಸಾವಿರ ರನ್‌ಗಳ ಗಡಿಯನ್ನೂ ದಾಟಿದ್ದಾರೆ. ಇಷ್ಟೊಂದು ಸ್ಥಿರ ಪ್ರದರ್ಶನ ನೀಡುತ್ತಿರುವ ಶಿಖರ್ ಧವನ್ ಅವರು ಟೀಮ್ ಇಂಡಿಯಾದ ಏಕ ದಿನ ತಂಡಕ್ಕೆ ಮಾತ್ರ ಸೀಮಿತಗೊಂಡಿದ್ದಾರೆ. ಇವೆಲ್ಲದರ ನಡುವೆ ಶಿಖರ್ ಧವನ್ ಅವರ ಪ್ರದರ್ಶನದ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ, ಉಳಿದ ಆಟಗಾರರಿಗೆ ಲಭಿಸಿದ ಮರ್ಯಾದೆ ಶಿಖರ್ ಧವನ್‌ಗೆ ಸಿಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಅಮೆಜಾನ್ ಪ್ರೈಮ್‌ನಲ್ಲಿ ನಡೆದ ವಿಶ್ಲೇಷಣೆಯಲ್ಲಿ ಮಾತನಾಡಿದ ಅವರು “ಧವನ್ ಅವರು ಟೀಮ್ ಇಂಡಿಯಾದ ಅತ್ಯಂತ ಅನುಭವಿ ಆಟಗಾರ. ಉತ್ತಮ ಸಾಧನೆಯನ್ನೂ ತೋರಿದ್ದಾರೆ. ಆದರೆ, ಉಳಿದ ಆಟಗಾರರಿಗೆ ದೊರಕಿದ ಮರ್ಯಾದೆ ಅವರಿಗೆ ಲಭಿಸಿಲ್ಲ. ನಿಜ ಮಾತು ಹೇಳುವುದಾದರೆ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಕಡೆಗೆ ಎಲ್ಲರೂ ಗಮನ ಹರಿಸಿದ್ದಾರೆ. ಧವನ್ ಸಾಧನೆಯನ್ನು ಗಮನಿಸಿಲ್ಲ. ವಿಶೇಷವಾಗಿ ಅವರು ಏಕದಿನ ಮಾದರಿಯಲ್ಲಿ ಅವರು ಆಡಿರುವ ಕೆಲವೊಂದು ಇನಿಂಗ್ಸ್‌ಗಳು ಅದ್ಭುತವಾಗಿದ್ದವು,” ಎಂದು ಹೇಳಿದ್ದಾರೆ.
“ಶಿಖರ್ ಧವನ್ ಅವರು ನೈಜ ಹೊಡೆತಗಳನ್ನು ಹೊಂದಿರುವ ಆಟಗಾರ. ವೇಗದ ಬೌಲರ್‌ಗಳನ್ನು ಅವರು ಸುಲಭವಾಗಿ ಎದುರಿಸಬಲ್ಲರು. ನಮ್ಮ ಸುತ್ತಲೂ ಸಾಕಷ್ಟು ಯುವ ಪ್ರತಿಭೆಗಳು ಇವೆ. ಆದರೆ, ಶಿಖರ್ ಧವನ್ ಅವರಂಥ ಅನುಭವಿ ಆಟಗಾರರು ಕಡಿಮೆ,” ಎಂಬುದಾಗಿ ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ | IPL 2023 | ಶಿಖರ್ ಧವನ್‌ಗೆ ಪಂಜಾಬ್ ಕಿಂಗ್ಸ್ ನಾಯಕತ್ವ, ಮಯಾಂಕ್ ಔಟ್