Site icon Vistara News

Rohit Sharma | ರೋಹಿತ್‌ ನಾಯಕತ್ವದ ಬಗ್ಗೆ ಈಗಲೇ ಭವಿಷ್ಯ ಹೇಳುವುದು ಸರಿಯಲ್ಲ ಎಂದ ಮಾಜಿ ಕ್ರಿಕೆಟಿಗ

Rohit Sharma

ಮುಂಬಯಿ : ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿಲ್ಲ. ಅದು ಮುಗಿದ ಬಳಿಕ ನ್ಯೂಜಿಲ್ಯಾಂಡ್‌ ಪ್ರವಾಸ ಮಾಡಿದ ಭಾರತ ತಂಡ ಅಲ್ಲೂ ಏಕ ದಿನ ಮಾದರಿ ಸರಣಿಯಲ್ಲಿ ಸೋಲು ಕಂಡಿತು. ಇಲ್ಲಿ ರೋಹಿತ್‌ ನಾಯಕತ್ವ ಇರಲಿಲ್ಲ. ನಂತರ ನಡೆದ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯಲ್ಲಿ ಭಾರತ ೨-೧ ಅಂತರದಿಂದ ಸೋಲು ಕಂಡಿತು. ಇದೇ ವೇಳೆ ರೋಹಿತ್‌ ಶರ್ಮ ಗಾಯಗೊಂಡು ತವರಿಗೆ ಮರಳುವಂತಾಯಿತು. ಕೆ. ಎಲ್‌ ರಾಹುಲ್‌ ನೇತೃತ್ವದಲ್ಲಿ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡುತ್ತಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ರೋಹಿತ್‌ ನಾಯಕತ್ವ ಸಾಮರ್ಥ್ಯದ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಆದರೆ, ಭಾರತ ತಂಡದ ಮಾಜಿ ಆಲ್‌ರೌಂಡರ್‌ ಮೊಹ್ಮಮದ್‌ ಕೈಫ್‌ ಅವರು, ತಕ್ಷಣದಲ್ಲೇ ರೋಹಿತ್‌ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ ಎಂದಿದ್ದಾರೆ.

“ರೋಹಿತ್‌ ಶರ್ಮ ಅವರು ಉತ್ತಮ ನಾಯಕ. ಅವರಿನ್ನೂ ನಾಯಕತ್ವದ ಆರಂಭಿಕ ಹಂತದಲ್ಲಿದ್ದಾರೆ. ಹೀಗಾಗಿ ಅವರ ಕುರಿತು ವಿಮರ್ಶೆ ಮಾಡುವುದಕ್ಕೆ ಇದು ಸೂಕ್ತ ಸಮಯವಲ್ಲ. ಅವರ ಮೇಲೆ ಒತ್ತಡ ಇರುವುದಂತೂ ನಿಜ. ಯಾಕೆಂದರೆ ಒಂದು ಬಾರಿ ನಾಯಕರಾದಾಗ ಐಸಿಸಿ ಟ್ರೋಫಿ ಗೆಲ್ಲುವ ಒತ್ತಡ ಅವರ ಮೇಲೆ ಇರುತ್ತದೆ. ಹಾಗೆಂದು ಅವರನ್ನು ಕೆಟ್ಟ ನಾಯಕ ಎಂದು ಕರೆಯಲು ಸಾಧ್ಯವಿಲ್ಲ,ʼʼ ಎಂಬುದಾಗಿ ಕೈಫ್‌ ಹೇಳಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ರೋಹಿತ್‌ ಶರ್ಮ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ವಿರಾಟ್‌ ಕೊಹ್ಲಿ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ ರೋಹಿತ್‌ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಆ ಬಳಿಕ ನಡೆದ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸಿತ್ತು. ವಿಶ್ವ ಕಪ್‌ನಲ್ಲೂ ಯಶಸ್ಸು ಸಾಧಿಸಿಲ್ಲ. ಆದರೆ, ರೋಹಿತ್‌ ಶರ್ಮ ಅವರು ಐಪಿಎಲ್‌ನಲ್ಲಿ ಒಟ್ಟಾರೆ ೫ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಅದೇ ವಿಶ್ವಾಸದ ಮೇಲೆ ಅವರಿಗೆ ಟೀಮ್‌ ಇಂಡಿಯಾದ ನಾಯಕತ್ವವನ್ನೂ ನೀಡಲಾಗಿತ್ತು. ಆದರೆ, ದ್ವಿಪಕ್ಷೀಯ ಸರಣಿಯಲ್ಲಿ ಅವರ ನೇತೃತ್ವದ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ, ಪ್ರಮುಖ ಟೂರ್ನಿಗಳಲ್ಲಿ ಯಶಸ್ಸು ಸಾಧಿಸಿಲ್ಲ. ಅಲ್ಲದೆ, ೨೦೨೩ರಲ್ಲಿ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್‌ ನಡೆಯಲಿದೆ. ಅದಕ್ಕಾಗಿ ಭಾರತ ತಂಡ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಹಿತ್‌ ಅವರ ನಾಯಕತ್ವದ ಬಗ್ಗೆ ಚರ್ಚೆಗಳು ಶುರುವಾಗಿದೆ.

“ರೋಹಿತ್‌ ಶರ್ಮ ಅವರು ಐಸಿಸಿ ಟ್ರೋಫಿಯನ್ನು ಗೆದಿಲ್ಲ. ಆದರೆ, ದ್ವಿ ಪಕ್ಷೀಯ ಸರಣಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದಾಗ್ಯೂ ಅಭಿಮಾನಿಗಳಿಗೆ ಐಸಿಸಿ ಟ್ರೋಫಿಯ ಕೊರತೆ ಬಗ್ಗೆ ಬೇಸರವಿದೆ. ರೋಹಿತ್‌ ಶರ್ಮ ಉತ್ತಮ ಬ್ಯಾಟರ್‌ ಹಾಗೂ ಉತ್ತಮ ನಾಯಕ. ಇಂಗ್ಲೆಂಡ್‌ ಪ್ರವಾಸ ಹಾಗೂ ಐಸಿಸಿ ಟೂರ್ನಮೆಂಟ್‌ಗಳನ್ನು ಹೊರತುಪಡಿಸಿದರೆ ಉತ್ತಮ ಸಾಧನೆ ಮಾಡಿದ್ದಾರೆ. ಒಂದು ತಂಡದ ಸಾಧನೆಯ ಹಾದಿಯಲ್ಲಿ ಏರಿಳಿತಗಳು ಇರುವುದೇ,ʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Team India | ರೋಹಿತ್‌ ಶರ್ಮ ಕುರಿತು ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ ಅಧ್ಯಕ್ಷ ಜಯ್‌ ಶಾ

Exit mobile version