ಮುಂಬಯಿ: ಭಾರತ ಹಾಗೂ ಆಸ್ಟ್ರೇಲಿಯಾ (INDvsAUS) ನಡುವಿನ ಟೆಸ್ಟ್ ಸರಣಿ ಪಂದ್ಯಗಳು ನಡೆದಿರುವ ಪಿಚ್ಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಪಿಚ್ಗಳೆಲ್ಲವೂ ಬ್ಯಾಟರ್ಗಳಿಗೆ ದುಸ್ವಪ್ನವಾಗಿದ್ದವು ಎಂದು ಕ್ರಿಕೆಟ್ ಕಾರಿಡಾರ್ನಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಇದೇ ವೇಳೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಕೆ. ಎಲ್ ರಾಹುಲ್ ಪ್ರದರ್ಶನದ ಬಗ್ಗೆಯೂ ವಿಶ್ಲೇಷಣೆಗಳು ನಡೆಯುತ್ತಿವೆ. ಮೂರು ಪಂದ್ಯ ನಡೆದ ಪಿಚ್ಗಳಲ್ಲಿ ಬ್ಯಾಟ್ ಮಾಡುವುದು ಸುಲಭದ ಸಂಗತಿಯಲ್ಲ ಎಂದು ಹೇಳಲಾಗುತ್ತಿದ್ದರೂ, ರಾಹುಲ್ ವಿಚಾರದಲ್ಲಿ ಅವರನ್ನೇ ನೇರವಾಗಿ ಟೀಕೆ ಮಾಡಲಾಗುತ್ತಿದೆ. ಸತತವಾಗಿ ಟೀಕೆಗಳು ಎದುರಾದ ಕಾರಣ ಅವರನ್ನು ಮೂರನೇ ಪಂದ್ಯದಲ್ಲಿ ಆಡಿಸಿಲ್ಲ. ಬದಲಾಗಿ ಶುಭ್ಮನ್ ಗಿಲ್ಗೆ ಅವಕಾಶ ನೀಡಲಾಗಿತ್ತು. ಅವರು ಕೂಡ ವೈಫಲ್ಯ ಎದುರಿಸಿದ್ದರು. ಈ ಕುರಿತು ಮಾತನಾಡಿದ ವಿಶ್ವ ಕಪ್ ವಿಜೇತ ಭಾರತ ತಂಡದ ಅಟಗಾರ ಕೃಷ್ಣಮಾಚಾರಿ ಶ್ರೀಕಾಂತ್, ಮೂರನೇ ಪಂದ್ಯದಲ್ಲಿ ರಾಹುಲ್ಗೆ ಅವಕಾಶ ನೀಡದಿರುವುದೇ ಒಳಿತಾಯಿತು ಎಂದು ಹೇಳಿದ್ದಾರೆ.
ಮೂರನೇ ಪಂದ್ಯ ನಡೆದ ಇಂದೋರ್ ಪಿಚ್ನಲ್ಲಿ ಬ್ಯಾಟ್ ಮಾಡುವುದು ಸಾಧ್ಯವೇ ಇರಲಿಲ್ಲ. ಅದು ಬೌಲಿಂಗ್ ವಿಭಾಗಕ್ಕೆಂದೇ ಮಾಡಲಾದ ಪಿಚ್. ಈ ಪಿಚ್ನಲ್ಲಿ ಭಾರತ ತಂಡದ ಎಲ್ಲ ಬ್ಯಾಟರ್ಗಳು ವೈಫಲ್ಯ ಎದುರಿಸಿದ್ದಾರೆ. ಒಂದು ವೇಳೆ ರಾಹುಲ್ ಆಡಿದ್ದರೂ ಅವರು ವೈಫಲ್ಯ ಎದುರಿಸುತ್ತಿದ್ದರು. ಹಾಗಾಗಿದ್ದರೆ ಅವರ ಬಗ್ಗೆ ಮತ್ತಷ್ಟು ಟೀಕೆಗಳು ಬರುತ್ತಿದ್ದವು ಹಾಗೂ ಅವರ ಕ್ರಿಕೆಟ್ ಬದುಕೇ ಮುಗಿದು ಹೋಗುತ್ತಿತ್ತು ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
ಕೆ. ಎಲ್ ರಾಹುಲ್ ಮೊದಲೆರಡು ಪಂದ್ಯದಲ್ಲೂ ವೈಫಲ್ಯ ಕಂಡಿದ್ದರು. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ ಕೇವಲ 20 ರನ್ ಗಳಿಸಿದ್ದರು. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 17 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 1 ರನ್ ಗಳಿಸಿದ್ದರು. ಒಟ್ಟಾರೆಯಾಗಿ 38 ರನ್ಗಳನ್ನು ಮಾತ್ರ ಗಳಿಸಿದ್ದರು.
ಇದನ್ನೂ ಓದಿ : IND VS AUS: ಇಂದೋರ್ ಪಿಚ್ಗೆ ಕಳಪೆ ರೇಟಿಂಗ್ಸ್ ಕೊಟ್ಟ ಐಸಿಸಿ
ಮೂರನೇ ಪಂದ್ಯ ನಡೆದ ಇಂದೋರ್ ಪಿಚ್ನಲ್ಲಿ ವಿರಾಟ್ ಕೊಹ್ಲಿಯಂಥ ಬ್ಯಾಟರ್ಗಳಿಗೆ ಆಡಲು ಸಾಧ್ಯವಾಗಿಲ್ಲ. ಹೀಗಾಗಿ ರಾಹುಲ್ಗೂ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ. ಇದೇ ವೇಳೆ ಅವರು ಪಿಚ್ ಬಗ್ಗೆಯೂ ಟೀಕೆ ವ್ಯಕ್ತಪಡಿಸಿದ್ದು, ನಾನು ಬೌಲಿಂಗ್ ಮಾಡಿದ್ದರೂ ವಿಕೆಟ್ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.