Site icon Vistara News

Team India | ರೋಹಿತ್‌ ನಾಯಕತ್ವಕ್ಕೆ 10ಕ್ಕೆ 10 ಅಂಕ ಕೊಟ್ಟ ಭಾರತದ ಮಾಜಿ ಆಲ್‌ರೌಂಡರ್‌

yuvaraj

ನವ ದೆಹಲಿ: ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ (Team India) ೧ ವಿಕೆಟ್ ವೀರೋಚಿತ ಸೋಲು ಎದುರಿಸಿದೆ. ಗೆಲ್ಲಬಹುದಾದ ಪಂದ್ಯದಲ್ಲಿ ಭಾರತ ತಂಡ ತನ್ನ ಫೀಲ್ಡಿಂಗ್ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡುವುದರೊಂದಿಗೆ ಸೋಲು ಕಂಡಿತ್ತು. ಬಾಂಗ್ಲಾದೇಶದ ಕೊನೇ ವಿಕೆಟ್‌ಗೆ ಭಾರತ ತಂಡ ೫೧ ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ಅದರಲ್ಲಿ ಎರಡು ಕ್ಯಾಚ್ ಡ್ರಾಪ್‌ಗಳು ಕೂಡ ಸೇರಿಕೊಂಡಿದ್ದವು. ತನ್ನ ತಂಡದ ಆಟಗಾರರು ಕ್ಯಾಚ್ ಬಿಡುತ್ತಿದ್ದಂತೆ ಕೋಪೋದ್ರಿಕ್ತರಾಗಿದ್ದ ರೋಹಿತ್‌ ಶರ್ಮ ಅವರನ್ನು ನಿಂದಿಸಿದ್ದರು. ಈ ವರ್ತನೆಗಾಗಿ ಅವರ ನಾಯಕತ್ವದ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದವು.

ಅಂತೆಯೇ ಕ್ರೀಡಾ ವೆಬ್‌ಸೈಟ್‌ ಒಂದು ರೋಹಿತ್‌ ಶರ್ಮ ಅವರು ಸಂಯಮ ಕಳೆದುಕೊಂಡು ಕೂಗಾಡುತ್ತಿರುವ ಎರಡು ಚಿತ್ರಗಳನ್ನು ಪ್ರಕಟಿಸಿ, ಇವರ ನಾಯಕತ್ವಕ್ಕೆ ಅಂಕಗಳನ್ನು ನೀಡಿ ಎಂಬುದಾಗಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌ ೧೦ಕ್ಕೆ ೧೦ ಅಂಕಗಳು ಎಂದು ಬರೆದಿದ್ದಾರೆ. ಈ ಮೂಲಕ ನಾಯಕನಾದವನು ತನ್ನ ತಂಡದ ಸದಸ್ಯರು ತಪ್ಪು ಮಾಡಿದಾಗ ಕೋಪಗೊಳ್ಳುವುದು ಸಹಜ ಎಂಬುದನ್ನು ಒತ್ತಿ ಹೇಳಿದ್ದರು. ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಇವೆಲ್ಲ ಮಾಮೂಲು ಎಂಬುದಾಗಿಯೂ ಹೇಳಿದ್ದರು.

ಭಾರತ ತಂಡ ಮೊದಲ ಪಂದ್ಯದಲ್ಲಿ ಸೋತಿರುವ ಕಾರಣ ಮೂರು ಪಂದ್ಯಗಳ ಸರಣಿಯಲ್ಲಿ ೦-೧ ಹಿನ್ನಡೆಗೆ ಒಳಗಾಗಿದೆ. ಹೀಗಾಗಿ ಚೇತರಿಸಿಕೊಂಡು ಮುಂದಿನ ಪಂದ್ಯದಲ್ಲಿ ಜಯ ಸಾಧಿಸುವ ಯೋಜನೆ ರೂಪಿಸಿಕೊಂಡಿದೆ. ಮೊದಲ ಪಂದ್ಯ ನಡೆದಿರುವ ಮೀರ್‌ಪುರ ಕ್ರಿಕೆಟ್ ಸ್ಟೇಡಿಯಮ್‌ನಲ್ಲೇ ಈ ಪಂದ್ಯವೂ ಆಯೋಜನೆಗೊಂಡಿದೆ. ಹೀಗಾಗಿ ಮೊದಲ ಪಂದ್ಯದ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲುವಿನ ಕಡೆಗೆ ಚಿತ್ತ ಹರಿಸಬೇಕಾಗಿದೆ ರೋಹಿತ್ ಪಡೆ.

ಇದನ್ನೂ ಓದಿ | IND VS BAN | ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​ ಹೇಗಿದೆ?

Exit mobile version