ನಾಗ್ಪರ: ಫೆಬ್ರವರಿ 9ರಂದು ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿಯ (Border Gavaskar Trophy) ಈ ಹಣಾಹಣಿಯಲ್ಲಿ ಪಾಲ್ಗೊಳ್ಳುವುದಕ್ಕೆ ಇತ್ತಂಡಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ. ಹಿರಿಯ ಕ್ರಿಕೆಟಿಗರನೇಕರು ಮುಂದಿನ ಸರಣಿಗೆ ಯಾವ ರೀತಿಯ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಸಲಹೆ ಕೊಡುತ್ತಿದ್ದಾರೆ. ಇವೆಲ್ಲದರ ನಡುವೆ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ ಯಾರು ಇನಿಂಗ್ಸ್ ಅರಂಭಿಸಬೇಕು ಎಂಬ ಸಲಹೆ ಕೊಟ್ಟಿದ್ದಾರೆ. ಅವರ ಪ್ರಕಾರ ಕನ್ನಡಿಗ ಕೆ. ಎಲ್. ರಾಹುಲ್ಗಿಂತ ಶುಭ್ಮನ್ ಗಿಲ್ಗೆ ಅವಕಾಶ ಕೊಡುವುದೇ ಉತ್ತಮ ಎಂದು ಹೇಳಿದ್ದಾರೆ.
ಶುಭ್ಮನ್ ಗಿಲ್ ಜನವರಿ ತಿಂಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯಲ್ಲಿ ಎರಡು ಶತಕ ಹಾಗೂ ಟಿ20 ಸರಣಿಯಲ್ಲಿ ಒಂದು ಶತಕ ಬಾರಿಸಿದ್ದಾರೆ. ಉತ್ತಮ ಫಾರ್ಮ್ನಲ್ಲಿ ಇರುವ ಅವರೇ ಭಾರತ ತಂಡದ ಪರವಾಗಿ ಇನಿಂಗ್ಸ್ ಆರಂಭಿಸಬೇಕು ಎಂದು ಅವರು ಹೇಳಿದ್ದಾರೆ.
ಶುಭ್ಮನ್ ಗಿಲ್ಗೆ ದೊಡ್ಡ ಮೊತ್ತ ಪೇರಿಸುವ ಶಕ್ತಿ ಇದೆ. ರೋಹಿತ್ ಶರ್ಮಾ ಜತೆ ಅವರು ಇನಿಂಗ್ಸ್ ಆರಂಭಿಸುವುದರಿಂದ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿದೆ. ಹೀಗಾಗಿ ಅವರನ್ನು ಆಡುವ 11ರ ಬಳಗಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಆರಂಭಿಕರಾಗಿ ಬ್ಯಾಟ್ ಮಾಡಲು ಇಳಿಸಲಬೇಕು ಎಂದ ಮಾಜಿ ಆಫ್ಸ್ಪಿನ್ನರ್ ಸಲಹೆ ಕೊಟ್ಟಿದ್ದಾರೆ.
ಇದನ್ನೂ ಓದಿ : Virat Kohli: ಶುಭ್ಮನ್ ಗಿಲ್ ಭವಿಷ್ಯದ ಕ್ರಿಕೆಟ್ ತಾರೆ; ವಿರಾಟ್ ಕೊಹ್ಲಿ ವಿಶ್ವಾಸ
23 ವರ್ಷದ ಯುವ ಬ್ಯಾಟರ್ 2020ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧವೇ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 13 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 736 ರನ್ ಬಾರಿಸಿದ್ದಾರೆ.