ನವ ದೆಹಲಿ : ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ತಂಡದ ಸಂಯೋಜನೆ ಹಾಗೂ ಕೋಚಿಂಗ್ ಸಿಬ್ಬಂದಿ ಸಾಮರ್ಥ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ಟಿ೨೦ ತಂಡಕ್ಕೆ ಆಶೀಶ್ ನೆಹ್ರಾ ಅವರನ್ನು ಕೋಚ್ ಆಗಿ ನೇಮಕ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಿಟಿಐ ಜತೆ ಮಾತನಾಡಿದ ಅವರು “ಟಿ೨೦ ಮಾದರಿಗೆ ಆಶೀಶ್ ನೆಹ್ರಾ ಅವರು ಕೋಚ್ ಆಗುವುದು ಉತ್ತಮ. ದ್ರಾವಿಡ್ ಅವರ ಮೇಲೆ ಗೌರವ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ನಾವಿಬ್ಬರು ಸಾಕಷ್ಟು ವರ್ಷ ಜತೆಯಾಗಿಯೇ ಆಡಿದ್ದೇವೆ. ದ್ರಾವಿಡ್‌ಗೆ ಹೆಚ್ಚು ಅನುಭವ ಇರಬಹುದು. ಆದರೆ, ವಿಭಿನ್ನ ಮಾದರಿಯಾಗಿರುವ ಕಾರಣ ನೆಹ್ರಾ ಅವರಂಥ ಕೋಚ್ ಉತ್ತಮ,” ಎಂಬುದಾಗಿ ಹೇಳಿದ್ದಾರೆ.
”ಇತ್ತೀಚಿನ ಕೆಲ ವರ್ಷಗಳ ಕಾಲ ಆಡಿದ ಕ್ರಿಕೆಟಿಗರೇ ಟಿ೨೦ ಮಾದರಿಗೆ ಕೋಚ್ ಆಗುವುದು ಉತ್ತಮ. ಹಾಗೆಂದು ರಾಹುಲ್ ಅವರನ್ನು ತೆಗೆದು ಹಾಕಿ ಎಂದು ಹೇಳುತ್ತಿಲ್ಲ. ಬದಲಾಗಿ ಅವರಿಬ್ಬರೂ ಜತೆಯಾಗಿ ಕೆಲಸ ಮಾಡಬೇಕು,”ಎಂದು ಭಜಿ ಹೇಳಿದ್ದಾರೆ.
ಇಂಥ ವ್ಯವಸ್ಥೆಯಿಂದಾಗಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಾಕಷ್ಟು ವಿಶ್ರಾಂತಿಯೂ ಸಿಗುತ್ತದೆ. ಒತ್ತಡ ನಿರ್ವಹಣೆ ಮಾಡಲೂ ಅವರಿಗೆ ಸಾಧ್ಯವಾಗುತ್ತದೆ ಎಂಬುದಾಗಿ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಆಶಿಶ್ ನೆಹ್ರಾ ಅವರು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಷ್ಟೊಂದು ಬಲಿಷ್ಠವಲ್ಲ ತಂಡದ ಮೂಲಕ ಅವರು ಟ್ರೋಫಿ ಗೆದ್ದಿರುವ ಹಿನ್ನೆಲೆಯಲ್ಲಿ ಅವರು ಸಾಮರ್ಥ್ಯ ಹೊಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ | Rishi Sunak | ಮಾಜಿ ವೇಗದ ಬೌಲರ್ ಆಶೀಶ್ ನೆಹ್ರಾ ಬ್ರಿಟನ್ ಪ್ರಧಾನಿಯಾದ್ರಂತೆ; ಹೌದಾ?