ಮುಂಬಯಿ : ಕುಲ್ಚಾ ಎಂದೇ ಕರೆಸಿಕೊಳ್ಳುತ್ತಿದ್ದ ಭಾರತದ ಸ್ಪಿನ್ ಜೋಡಿಯಾಗಿರುವ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಹಲ್ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದ (Team India) ಕಾಯಂ ಸದಸ್ಯರಾಗಿ ಆಡಲು ಸಾಧ್ಯವಾಗುತ್ತಿಲ್ಲ. ಧೋನಿ ನಾಯಕತ್ವದ ಸಂದರ್ಭದಲ್ಲಿ ಈ ಇಬ್ಬರು ಬೌಲರ್‌ಗಳು ಮ್ಯಾಚ್ ವಿನ್ನರ್‌ಗಳೆನಿಸಿಕೊಂಡಿದ್ದರು. ಆದರೆ, ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವರಿಬ್ಬರೂ ಸ್ಥಾನ ಪಡೆದಿಲ್ಲ. ಇದಕ್ಕೆ ಭಾರತ ತಂಡದ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್ ಬೇಸರ ವ್ಯಕ್ತಪಡಿಸಿದ್ದಾರೆ.
ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಹಲ್ ಸಾಕಷ್ಟು ಕೌಶಲಗಳನ್ನು ಹೊಂದಿರುವ ಆಟಗಾರರು. ಇವರು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಗಳನ್ನು ಕಬಳಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಈ ಜೋಡಿಯನ್ನು ಭಾರತ ತಂಡದಲ್ಲಿ ಆಡಿಸಲೇಬೇಕು. ಅವರಿಬ್ಬರು ಎದುರಾಳಿ ತಂಡಕ್ಕೆ ಆಘಾತ ಕೊಡಬಲ್ಲ ಆಟಗಾರರು ಎಂಬುದಾಗಿ ಶಿವರಾಮಕೃಷ್ಣನ್ ಅವರು ಹೇಳಿದ್ದಾರೆ.
“ನಾನು ಮತ್ತು ರವಿ ಶಾಸ್ತ್ತಿ ಭಾರತ ತಂಡದಲ್ಲಿ ಆಡುವ ವೇಳೆಯೂ ಅದೇ ರೀತಿಯಾಗಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುತ್ತಿದ್ದೆವು. ನನ್ನ ಕೈಗೆ ಚೆಂಡು ನೀಡುತ್ತಿದ್ದ ನಾಯಕ ಸುನೀಲ್ ಗವಾಸ್ಕರ್ ೧೦ ಓವರ್‌ಗಳ ಸ್ಪೆಲ್‌ನಲ್ಲಿ ೫೦ರಿಂದ ೬೦ ರನ್ ನೀಡಿದರೂ ಪರ್ವಾಗಿಲ್ಲ. ನಾಲ್ಕು ವಿಕೆಟ್ ಕಬಳಿಸಬೇಕು ಎಂದು ಹೇಳುತ್ತಿದ್ದರು. ಇನ್ನೊಂದು ಬದಿಯಲ್ಲಿ ರವಿ ಶಾಸ್ತ್ರಿ ಎದುರಾಳಿ ಮೇಲೆ ಒತ್ತಡ ಹೇರುತ್ತಿದ್ದರು. ಹೀಗಾಗಿ ನಾನು ವಿಕೆಟ್ ಪಡೆಯುತ್ತಿದ್ದೆ. ಅಂತೆಯೇ ಕುಲ್ದೀಪ್ ಯಾದವ್ ಮತ್ತು ಚಹಲ್‌ಗೂ ವಿಕೆಟ್ ಪಡೆಯುವ ಸಾಮರ್ಥ್ಯ ಇದೆ,” ಎಂಬುದಾಗಿ ಶಿವರಾಮಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | INDvsNZ | 2ನೇ ಪಂದ್ಯಕ್ಕೆ ಮೊದಲು ಲಕ್ಷ್ಮಣ್, ಧವನ್‌ಗೆ ಮಾಜಿ ಕೋಚ್ ರವಿ ಶಾಸ್ತ್ರಿ ಕೊಟ್ಟ ಎಚ್ಚರಿಕೆಯೇನು?