ಬ್ರಿಸ್ಬೇನ್ : ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ (Gabba Test) ಎರಡೇ ದಿನಗಳ ಒಳಗೆ ಮುಕ್ತಾಯ ಕಂಡಿದೆ. ಆತಿಥೇಯ ತಂಡ 6 ವಿಕೆಟ್ಗಳ ವಿಜಯ ತನ್ನದಾಗಿಸಿಕೊಂಡಿದೆ. ಕೇವಲ 142 ಓವರ್ಗಳ ಅಂತರದಲ್ಲಿ 34 ವಿಕೆಟ್ಗಳ ಪತನಗೊಂಡಿವೆ. ಈ ಫಲಿತಾಂಶದ ಬಳಿಕ ಐತಿಹಾಸಿಕ ಗಬ್ಬಾ ಪಿಚ್ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇಂಥದ್ದೊಂದು ಪಿಚ್ ತಯಾರಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿರುದ್ಧ ಟೀಕೆಗಳ ಬಾಣಗಳು ಎರಗುತ್ತಿವೆ. ಭಾರತ ತಂಡದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಕೂಡ ಈ ಬಗ್ಗೆ ಖಾರವಾಗಿ ಟೀಕೆ ಮಾಡಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಬೂಟಾಟಿಕೆ ಮಾಡುತ್ತಿದೆ ಎಂದಿದ್ದಾರೆ.
142 ಓವರ್ಗಳಲ್ಲಿ ಪಂದ್ಯ ಮುಗಿದಿದೆ. ಎರಡು ದಿನವೂ ಪಂದ್ಯ ನಡೆಯಲಿಲ್ಲ. ಆದರೂ ಟೆಸ್ಟ್ ಪಂದ್ಯಕ್ಕೆ ಯಾವ ರೀತಿಯ ಪಿಚ್ ಇರಬೇಕು ಎಂದು ಬೇರೆಯವರಿಗೆ ಉಪನ್ಯಾಸ ಮಾಡುವ ಮೊಂಡುತನ ಅವರಿಗಿದೆ. ಒಂದು ವೇಳೆ ಇದು ಭಾರತದಲ್ಲಿ ಸಂಭವಿಸಿದ್ದರೆ ಟೆಸ್ಟ್ ಕ್ರಿಕೆಟ್ನ ಅಂತ್ಯ, ಕ್ರಿಕೆಟ್ ಅನ್ನು ಹಾಳು ಮಾಡಲಾಗುತ್ತಿದೆ ಎಂದೆಲ್ಲ ಕಥೆ ಕಟ್ಟುತ್ತಿದ್ದರು. ಎಂಥಾ ಬೂಟಾಟಿಕೆ ಇದು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಸೆಹ್ವಾಗ್ ಅವರಂತೆಯೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಕೂಡ ಪಿಚ್ನ ಸಾಚಾತನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಗಬ್ಬಾ ಪಿಚ್ನಲ್ಲಿ ಅಷ್ಟೊಂದು ಹುಲ್ಲನ್ನು ಬಿಟ್ಟಿರುವುದು ಯಾಕೆ? ಟೆಸ್ಟ್ ಕ್ರಿಕೆಟ್ನಲ್ಲಿ ಇದೊಂದು ವಿಶ್ವದ ಅತ್ಯುತ್ತಮ ಪಿಚ್ ಎಂದು ಹೇಳಲಾಗುತ್ತಿದೆ. ಯಾಕೆ ಅದನ್ನು ಬದಲಿಸಿದ್ದಾರೆ, ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | AUS VS SA | ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸೋಲು; ಟೀಮ್ ಇಂಡಿಯಾಕ್ಕೆ ಲಾಭ!